ಬೆಂಗಳೂರು: ಆಕಾಶದೆತ್ತರಕ್ಕೆ ಹಾರುವುದಕ್ಕಿಂತಲೂ ವಿನೀತರಾಗಿರುವುದು ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಶನಿವಾರ ರಾತ್ರಿ ಸುರೇಶ್ ಬಿ.ಎನ್ ಅವರ ಆತ್ಮಕಥೆ ಆನ್ ಟು ದಿ ರಾಕೆಟ್‍ಶಿಪ್ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಸುರೇಶ್ ಅವರ ಜೀವನದ ಪಯಣವನ್ನು ತಿಳಿಸುವ ಕೃತಿ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ತರುವಂತಿದೆ. ಸಾಧಿಸುವ ಸ್ಫೂರ್ತಿಯುಳ್ಳ, ಅತ್ಯಂತ ವಿನಯಶೀಲ ವ್ಯಕ್ತಿ ಸುರೇಶ್. ವಿನಯಶೀಲರಾಗಿ ಉಳಿಯುವುದು ಬಹಳ ಕಷ್ಟ. ಅದೇ ಒಂದು ಸಾಧನೆ. ಯಶಸ್ಸು ಸಾಧನೆಯೆಡೆಗಿನ ಪಯಣ. ಕರ್ನಾಟಕ ಮತ್ತು ದೇಶದ ಹೆಮ್ಮೆಯ ಪುತ್ರ ಸುರೇಶ್ ಎಂದರು. ಎಲ್ಲರೂ ಸುರೇಶ್ ಅವರ ಆತ್ಮಕಥೆಯನ್ನು ಓದಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇಸ್ರೋ ಎಂಬ ದೇವಸ್ಥಾನ: ಇಸ್ರೋ ದೇವರ ಬಳಿ ಕೊಂಡೊಯ್ಯುವ ದೇವಸ್ಥಾನವಿದ್ದಂತೆ. ಇಸ್ರೋ ಅನೇಕ ಸ್ಯಾಟಲೈಟ್‍ಗಳನ್ನು ನೀಡಿದೆ. ದೇವರನ್ನು ತಲುಪಲು ಜ್ಞಾನ ಮತ್ತು ಧ್ಯಾನ ಅಗತ್ಯ. ಇಸ್ರೋದಲ್ಲಿ ಯಶಸ್ಸು ಸಾಧಿಸಲು ಇವೆರಡೂ ಬಹಳ ಮುಖ್ಯ. ವೈಜ್ಞಾನಿಕ ಜ್ಞಾನ ಮತ್ತು ಧ್ಯಾನ ಅಗತ್ಯ. ವಿಜ್ಞಾನಿಗಳನ್ನು ಕಂಡಾಗ ವ್ಯಕ್ತಿಯಲ್ಲಿ ಹುದುಗಿರುವ ಜ್ಞಾನದ ಭಂಡಾರವನ್ನೇ ಕಂಡಂತಾಗುವುದು. ದೇಶ ಹಾಗೂ ಸಮಾಜದ ಒಳಿತಿಗಾಗಿ ಜ್ಞಾನವನ್ನು ಉಪಯೋಗಿಸುವವರೇ ಅತ್ಯುತ್ತಮ ವ್ಯಕ್ತಿಗಳು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಪರಿಹಾರವೇ ಗುರಿ: ಸಮಾಜದಲ್ಲಿ ನಿರ್ದಿಷ್ಟವಾಗಿ ಕೆಲವರ ಏಳಿಗೆಯನ್ನು ಗುರಿಯಾಗಿಸಿಕೊಂಡು ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಅದೇ ರೀತಿ ಸದ್ದಿಲ್ಲದೇ ಮುಂದಿನ ಪೀಳಿಗೆಗಾಗಿ, ಸಮಸ್ಯೆಗಳನ್ನು ಬಗೆಹರಿಸಲು ಅನೇಕ ವಿಜ್ಞಾನಿಗಳು ಶ್ರಮಿಸುತ್ತಾರೆ. ಇಸ್ರೋದಲ್ಲಿ ಪರಿಹಾರವೇ ಗುರಿ. ಅದೇ ಅದರ ಮೌಲ್ಯ ಕೂಡ. ಕೊಪ್ಪ ತಾಲ್ಲೂಕಿನ ಹೊಸಕೆರೆಯಲ್ಲಿ ಹುಟ್ಟಿದ ಸುರೇಶ್ ಅವರ ಜೀವನ ಅತ್ಯಂತ ಎತ್ತರಕ್ಕೇ ಏರಿ, ಇಡೀ ಪ್ರಪಂಚವೇ ಕಾಣುವಂತಾಗಿದೆ. ಎತ್ತರಕ್ಕೆ ಏರಿದಷ್ಟೂ, ನಮ್ಮ ಜೀವನ ಏಕಾಂಗಿಯಾಗುತ್ತದೆ. ಆದರೂ, ಎಲ್ಲರ ಬಗ್ಗೆ ಯೋಚಿಸುವ ಶಕ್ತಿಯನ್ನು ಸುರೇಶ್ ಅವರು ಕಳೆದುಕೊಂಡಿಲ್ಲ. ಭಾರತೀಯ ಜನರಿಗೆ ಸುರೇಶ್ ಅವರು ಕೊಡುಗೆ ನೀಡಿದ್ದಾರೆ. ಅವರ ಪುತ್ರ ಸುರೇಶ್ ಅವರನ್ನು ಮಣ್ಣಿನ ಮಗ ಎಂದು ಉಲ್ಲೇಖಿಸಿರುವುದು ಸೂಕ್ತವಾಗಿಯೇ ಇದೆ ಎಂದರು.
ಪರಿಹಾರಗಳನ್ನು ಕಂಡುಕೊಳ್ಳುವ ಪ್ರಾಧಿಕಾರ ರಚನೆ: ಭಾರತೀಯ ವಿಜ್ಞಾನ ಸಂಸ್ಥೆ, ಇಸ್ರೋ, ಸಿ.ಎಫ್.ಟಿ.ಆರ್ ಐ ಮುಂತಾದ ಸಮಸ್ಥೆಗಳನ್ನು ರಾಜ್ಯ ಹೊಂದಿದ್ದು, ಸಂವಾದ ಮಾಡುವ, ಸಮಸ್ಯೆಗಳಿಗೆ ಪರಿಹಾರ ಹುಡುಕುವ, ವೈಜ್ಞಾನಿಕ ಜ್ಞಾನದ ಬಳಕೆಯನ್ನು ಉತ್ತೇಜಿಸುವ ಸಂಸ್ಥೆಯ ಅಗತ್ಯವಿದೆ. ಇಂಥಹ ಪ್ರಾಧಿಕಾರವೊಂದನ್ನು ರಚಿಸಲು ಸರ್ಕಾರ ಸಿದ್ಧವಿದೆ ಎಂದರು. ಮುಂದಿನ ಪೀಳಿಗೆಯ ನಾವು ಕುರಿತು ಯೋಚಿಸಬೇಕಿದೆ. ನಾಗರಿಕತೆ ಬೆಳೆಯುತ್ತಿದೆ. ಸಂಸ್ಕøತಿ ಅಭಿವೃದ್ಧಿಯಾಗುತ್ತಿಲ್ಲ. ನಮಗೆ ನಾಗರಿಕತೆ ಮತ್ತು ಸಂಸ್ಕøತಿಯ ನಡುವಿನ ವ್ಯತ್ಯಾಸದ ಬಗ್ಗೆ ಸ್ಪಷ್ಟತೆ ಇಲ್ಲ. ಸುರೇಶ್ ಅವರಂತೆ ತಮ್ಮ ಅಲುಗಾಡದ ಬೇರುಗಳ ಬಗ್ಗೆ ಮಾತನಾಡುವವರು ನಮಗೆ ಅಗತ್ಯ. ಶೀಘ್ರದಲ್ಲಿಯೇ ಇಸ್ರೋ ಮುಂತಾದ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ, ನಿವೃತ್ತರಾಗಿರುವರನ್ನು ಒಳಗೊಂಡ ಸಂಸ್ಥೆ ರಚಿಸಿ ಅತ್ಯುತ್ತಮ ಕೆಲಸ ಮಾಡಲು ಮುಂದಾಗುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಮುಂದಿನ ಪೀಳಿಗೆಗೆ ಕೊಡುಗೆ: ಸಕಾರಾತ್ಮಕ ಕೆಲಸಗಳಿಗಾಗಿ ಮಾನವನ ಹೊಂದಿಕೊಳ್ಳುವ ಗುಣವನ್ನು ಬಳಕೆ ಮಾಡಬೇಕು. ವಿಜ್ಞಾನಿಗಳು ಈ ಬಗ್ಗೆ ಆಲೋಚಿಸಬೇಕು. ಕೆಲ ವಿಜ್ಞಾನಿಗಳು ಹೊಸ ಯೋಜನೆಗಳನ್ನು ಹೊತ್ತು ತರುತ್ತಾರೆ. ಮಾನವನ ಮೆದುಳಿನ ಶಕ್ತಿಯನ್ನು ಬಳಸಬೇಕು. ಬೆಂಗಳೂರು ಸಂಶೋಧನೆಗಳಿಗೆ ಹೇಳಿ ಮಾಡಿಸಿರುವ ಸ್ಥಳ. ಈ ಮಟ್ಟದಲ್ಲಿ ಬೇರ್ಯಾವ ರಾಜ್ಯವೂ ಯೋಚಿಸಲು ಸಾಧ್ಯವಿಲ್ಲ. ನಮ್ಮ ಪೂರ್ವಜನರಿಗೆ ಇದ್ದ ಮೌಲ್ಯಗಳಿಂದಾಗಿಯೇ ನಾವು ಇಂದು ಇದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ನಾವೇನು ಕೊಡುತ್ತೇವೆ ಎನ್ನುವುದು ಮುಖ್ಯ. ಈ ದಿಕ್ಕಿನತ್ತ ನಾವು ಯೋಚಿಸಬೇಕು ಎಂದರು.
ಸಮಾರಂಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್, ಇಸ್ರೋ ಅಧ್ಯಕ್ಷ ಸೋಮನಾಥನ್, ನಿಟಕಪೂರ್ವ ಇಸ್ರೋ ಅಧ್ಯಕ್ಷರಾದ ರಾಧಾಕೃಷ್ಣನ್, ಕಿರಣ್ ಕುಮಾರ್, ಡಿ.ಜಿ ಎ.ಡಿ.ಎ, ಡಿ.ಆರ್.ಡಿ.ಒ ಡಾ: ಗಿರೀಶ್ ದೇವಗಲ್, ಡಾ:ಕೆ.ಎಸ್. ಶಿವಂ, ಸುನೀಲ್ ಸುರೇಶ್, ಡಾ;ಬಿ.ಎನ್.ಸುರೇಶ್ ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

