ದೊಡ್ಡಬಳ್ಳಾಪುರ, (ನ.27): ಬಣಗಳಾಗಿದ್ದ ಜೆಡಿಎಸ್ ಪಕ್ಷದ ಮುಖಂಡರು ಪಂಚರತ್ನ ರಥಯಾತ್ರೆ ಹಿನ್ನಲೆಯಲ್ಲಿ ಒಗ್ಗೂಡಿ ನಗರದ ಪ್ರವಾಸಿಮಂದಿರಲ್ಲಿ ಸಭೆ ನಡೆಸಿ, ಸುದ್ದಿಗೋಷ್ಠಿ ನಡೆಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಎಲ್ಲ ಪಕ್ಷದಲ್ಲಿ ಇರುವಂತೆ ನಮ್ಮಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ. ತಾಲೂಕಿನ ಹಿರಿಯ ಮುಖಂಡರಾದ ಎಚ್.ಅಪ್ಪಯ್ಯಣ್ಣ ಅವರ ಮನೆಗೆ ಹೋಗಿ ಮಾತುಕತೆ ನಡೆಸಿದ್ದು, ಈಗ ಒಗ್ಗಟ್ಟಾಗಿದ್ದೇವೆ. ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಲಿದ್ದೇವೆ. ಇದು ಜಿಲ್ಲೆಯ ಮರ್ಯಾದೆ ಪ್ರಶ್ನೆಯಾಗಿದ್ದು, ಹಿಂದೆ 2 ಜಿಲ್ಲೆಗಳಲ್ಲಿ ನಡೆದಿರುವ ಪಂಚರತ್ನ ಯಾತ್ರೆಗಿಂತ ಭಿನ್ನವಾಗಿ ನಡೆಸಲು ಸಿದ್ದತೆ ಕೈಗೊಂಡಿದ್ದೇವೆ.
ಹಿಂದಿನದೆಲ್ಲವನ್ನು ಮರೆತು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಜಿಲ್ಲೆಯ ಮರ್ಯಾದೆ ಉಳಿಸಬೇಕು. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಬೇಕೆಂಬ ಆಕಾಂಕ್ಷೆ ಎಲ್ಲರಿಗೂ ಇದೆ.
ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಮಾಡಿರುವ ಕೆಲಸಗಳನ್ನು ಜನ ಸ್ಮರಿಸುತ್ತಿದ್ದಾರೆ. ನಮ್ಮ ಕ್ಷೇತ್ರದ ಶಕ್ತಿ ಪ್ರದರ್ಶನ, ಹಾಗೂ ಮತಗಳನ್ನು ವರಿಷ್ಟರಿಗೆ ಮನವರಿಕೆ ಮಾಡಿ ಅವರಿಗೆ ಖುಷಿ ನೀಡಿ, ಕುಮಾರಣ್ಣನ ಗೌರವ ಉಳಿಸಬೇಕು ಎಂದು ಮನವಿ ಮಾಡಿದರು.
ತಾಲೂಕಿನ ನಾಗದೇನಹಳ್ಳಿಯಲ್ಲಿ ನ.29ರಂದು ಬೆಳಿಗ್ಗೆ 9ಗಂಟೆಗೆ ರಥಯಾತ್ರೆ ಆಗಮಿಸಲಿದ್ದು, ಭವ್ಯ ಸ್ವಾಗತಕ್ಕೆ ಸಿದ್ದತೆಗಳು ನಡೆದಿವೆ. ಪಕ್ಷದ ವರಿಷ್ಟ ಎಚ್.ಡಿ.ಕುಮಾರಸ್ವಾಮಿ, ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಮೊದಲಾದ ಮುಖಂಡರು ಭಾಗವಹಿಸಲಿದ್ದಾರೆ. ನಂತರ ವಿವಿಧ ಹೋಬಳಿಗಳಲ್ಲಿ ಸಂಚರಿಸಿ, ಮಧುರೆ ಹೋಬಳಿಯ ಕನಸವಾಡಿಯಲ್ಲಿ ರಾತ್ರಿ ವಾಸ್ತವ್ಯ ನಡೆಯಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ ಮಾತನಾಡಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತದಲ್ಲಿ ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸಬೇಕೆಂಬ ಸೂಚನೆ ಹಿನ್ನೆಲೆಯಲ್ಲಿ ಎಲ್ಲರು ಒಗ್ಗಟ್ಟಾಗಿದ್ದೇವೆ. ಮಾಜಿ ಸಿಎಂ ಕುಮಾರಣ್ಣ ಅವರು ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ, ಅಂತಿಮವಾಗಿ ಕನಸವಾಡಿಯಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ಸಿಗುವುದಿಲ್ಲ ಎಂಬ ಕಪ್ಪುಚುಕ್ಕೆಯನ್ನು ಹೋಗಲಾಡಿಸಬೇಕು. ಎಲ್ಲಾ ಪಕ್ಷಗಳಲ್ಲಿಯೂ ಗೊಂದಲಗಳಿರುವುದು ಸಹಜ. ಕಾಂಗ್ರೆಸ್, ಬಿಜೆಪಿಯಲ್ಲಿ ಇದರ ನಾಲ್ಕರಷ್ಟಿವೆ. ಪಂಚರತ್ನ ಯಾತ್ರೆ ಐತಿಹಾಸಿಕ ಕಾರ್ಯಕ್ರಮ. ತಾಲೂಕು ಹಾಗೂ ರಾಜ್ಯದಲ್ಲಿ ಜೆಡಿಎಸ್ ದೀಪವಿದ್ದಂತೆ. ಈ ದೀಪದಿಂದ ಬೆಳಕನ್ನಷ್ಟೇ ಪಡೆದು ಬೆಂಕಿಯನ್ನು ಬಿಡಬೇಕು.
ಎಲ್ಲಾ ಪಕ್ಷದಲ್ಲಿರುವಂತೆ ನಮ್ಮಲ್ಲೂ ಸಣ್ಣ ಪುಟ್ಟ ಸಮಸ್ಯೆ, ಗೊಂದಲಗಳಿವೆ. ನಮ್ಮಲ್ಲಿ ಸಮಸ್ಯೆ ಬಗೆಹರಿಸಲು ಬೆಂಗಳೂರಿನಲ್ಲಿಯೇ ಹೈಕಮಾಂಡ್ ಇದೆ. ಆದರೆ, ರಾಷ್ಟ್ರೀಯ ಪಕ್ಷಗಳು ಪ್ರತಿ ವಿಚಾರಕ್ಕೂ ದೆಹಲಿಗೆ ಓಡಬೇಕು. ಇದು ನಮ್ಮ ಪ್ರಾದೇಶಿಕ ಪಕ್ಷದ ಬಲ ಎಂದು ಅಭಿಪ್ರಾಯಪಟ್ಟರು. ತಾಲೂಕಿನ ಐದೂ ಹೋಬಳಿಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಶ್ರಮಿಸಬೇಕು. ಪಂಚರತ್ನ ಯಾತ್ರೆಗೆ ಎಲ್ಲರೂ ಸ್ವಯಂಪ್ರೇರಿತರಾಗಿ ಭಾಗವಹಿಸಿ ಪಕ್ಷದ ಗೌರವ ಉಳಿಸಬೇಕು. ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಎಂದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ.ಎಚ್.ಜಿ.ವಿಜಯ ಕುಮಾರ್ ಮಾತನಾಡಿ, ಪಂಚರತ್ನ ರಥಯಾತ್ರೆ ನೆರೆಯ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅಭೂತಪೂರ್ವವಾಗಿ ನೆರವೇರಿದೆ. ಶಿಕ್ಷಣಕ್ಕೆ ಒತ್ತು, ವಸತಿ, ಆರೋಗ್ಯ, ಯುವಕರಿಗೆ ಉದ್ಯೋಗ, ಸಬಲೀಕರಣಗಳನ್ನು ಈಡೇರಿಸುವ ಗುರಿ ಹೊಂದಿರುವ ಈ ಯಾತ್ರೆಯಲ್ಲಿ ಜನರ ಬಳಿಗೇ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಮುಂದೆ ಅದಕ್ಕೆ ಪರಿಹಾರೋಪಾಯಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಈ ದಿಸೆಯಲ್ಲಿ ಜನರ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದರು.
ಇದು ಸೀಸನ್ ಒಗ್ಗಟ್ಟಲ್ಲ, ಕಾಯಂ ಒಗ್ಗಟ್ಟು: ಈ ಹಿಂದೆ ಚುನಾವಣೆಯಲ್ಲಿ ಒಗ್ಗಟ್ಟಾಗಿ ನಂತರ ದೂರವಾಗಿದ್ದ, ಅಪ್ಪಯ್ಯಣ್ಣ ಹಾಗೂ ಮುನೇಗೌಡರ ಬಣಗಳು ಈಗ ಮತ್ತೆ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಕಾರ್ಯಕ್ರಮದ ನಿಮಿತ್ತ ಮಾತ್ರವೇ ಎಂದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖಂಡರು ಇದು ಚುನಾವಣೆ ಸೀಸನ್ ಒಗ್ಗಟ್ಟಲ್ಲ. ಕಾಯಂ ಒಗ್ಗಟ್ಟಾಗಿರಲಿದೆ ಎಂದು ಹೇಳಿದರು. ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಶಾಸಕರನ್ನು ಗೆಲ್ಲಿಸುವತನಕ ಈ ಒಗ್ಗಟ್ಟು ಶಾಶ್ವತವಾಗಿರಲಿದೆ ಎಂದರು.
ಸುದ್ಧಿಗೋಷ್ಟಿಯಲ್ಲಿ ಜೆಡಿಎಸ್ ತಾಲೂಕು ಜೆಡಿಎಸ್ ಅಧ್ಯಕ್ಷ ಲಕ್ಷ್ಮೀಪತಯ್ಯ, ನಗರಸಭಾ ಸದಸ್ಯರಾದ ಟಿ.ಎನ್.ಪ್ರಭುದೇವ್, ಮಲ್ಲೇಶ್, ಮುಖಂಡರಾದ ಹುಸ್ಕೂರು ಆನಂದ್, ಟಿಎಪಿಎಂಸಿಎಸ್ ನಿರ್ದೇಶಕರಾದ ಲಕ್ಷ್ಮೀನಾರಾಯಣ, ಆನಂದ್, ವಕ್ತಾರ ಕುಂಟನಹಳ್ಳಿ ಮಂಜುನಾಥ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

