ದೊಡ್ಡಬಳ್ಳಾಪುರ, (ಡಿ.05): ರೈತರು ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಬೆಳೆಗಳನ್ನು ಬೆಳೆದರೆ ಹೆಚ್ಚಿನ ಇಳುವರಿ ಪಡೆಯಬಹುದೆಂದು ಸಾಸಲು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಿ.ಆರ್.ಕಸ್ತೂರಯ್ಯ ತಿಳಿಸಿದರು.
ತಾಲೂಕಿನ ಸಾಸಲು ಹೋಬಳಿಯ ಮಚ್ಚೇನಹಳ್ಳಿ ಗ್ರಾಮದ ರೈತ ಮುತ್ತರಾಯಪ್ಪ ಅವರ ಜಮೀನಿನಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ, ರಾಷ್ಟ್ರೀಯ ಆಹಾರ ಭದ್ರತಾ ಯೊಜನೆಯಡಿ ಆಯೋಜಿಸಿದ್ದ ಕ್ಷೇತ್ರೋತ್ಸವ ಹಾಗೂ ವಿಶ್ವ ಮಣ್ಣು ಅರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಗಿ ಬೆಳೆಯನ್ನು ಸಾಮಾನ್ಯವಾಗಿ ಜೂನ್ ಜುಲೈ ತಿಂಗಳಲ್ಲಿ ದೀರ್ಘವದಿ ತಳಿಗಳಾದ ಎಂ ಆರ್ 1 ಮತ್ತು ಎಂ ಆರ್ 6ನ್ನು ಬಿತ್ತನೆ ಮಾಡಬಹುದು ಹಾಗೂ ಅಲ್ಪಾವದಿ ತಳಿಗಳಾದ ಜಿಪಿಯು 28ಮತ್ತು ಎಂ ಲ್ 365 ನ್ನು ಆಗಸ್ಟ್ ಕೊನೆಯವಾರದವರೆಗೂ ಬಿತ್ತನೆ ಮಾಡಬಹುದು ಹಾಗೂ ಚಳಿಗಾಲದಲ್ಲೂ ಉತ್ತಮ ತಳಿಗಳನ್ನು ಬಿತ್ತನೆಕೂರಿಗೆ ಬಿತ್ತನೆ ಮಾಡುವುದರ ಮೂಲಕ ಬೆಳೆದು ಅಧಿಕ ಇಳುವರಿ ಪಡೆಯಬಹುದು ಹಾಗೆಯೇ ರೈತರು ಬೆಳೆ ಬೆಳೆಯುವ ಪದ್ಧತಿ ಕಳೆ ನಿರ್ವಹಣೆ ಪೀಡೆನಾಶಕಗಳ ನಿರ್ವಹಣೆ ಯ ಬಗ್ಗೆ ಹಾಗೂ ಕಟಾವಿನ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ಮಣ್ಣು ಅರೋಗ್ಯ ದಿನಾಚರಣೆ ಕುರಿತಂತೆ ಮಾತನಾಡಿದ ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ದಶರಥ್, ಮಣ್ಣಿನ ಮಹತ್ವ ಮತ್ತು ರೈತರು ಪ್ರತಿ ಎರಡು ವರ್ಷಕ್ಕೊಮ್ಮೆ ಜಮೀನಿನಲ್ಲಿ ಮಣ್ಣಿನ ಪರೀಕ್ಷೆಯನ್ನು ಮಾಡಿಸುವುದರಿಂದ ರೈತರು ಮಣ್ಣಿನಲ್ಲಿ ಯಾವ ಕೊರತೆ ಉಂಟಾಗಿದೆ ಎಂದು ತಿಳಿಯಬಹುದಾಗಿದೆ. ಅಲ್ಲದೆ ಯಾವ ಬೆಳೆ ಬೆಳೆಯಲು ಸೂಕ್ತ ಎಂಬ ವಿಚಾರ ತಿಳಿಯಬಹುದು ಎಂದರು.
ಪಶು ಇಲಾಖೆಯ ವೈದ್ಯರಾದ ಡಾ.ತಿರುಮಲ ಮಾತನಾಡಿ, ಹಸುವಿಗೆ ಕಾಲು ಬಾಯಿ ರೋಗದ ಹತೋಟಿ ಹಾಗೂ ಇತ್ತೀಚೆಗೆ ಚರ್ಮಗಂಟು ರೋಗವು ಹೆಚ್ಚಾಗುತ್ತಿದ್ದು ರೈತರು ಮುಂಜಾಗ್ರತೆಯನ್ನು ವಹಿಸುವಂತೆ ಹಾಗೂ ರೋಗ ತಡೆಗಟ್ಟಲು ಲಸಿಕೆಯನ್ನು ಹಾಕಿಸಬೇಕೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕೃಷಿಕ ಸಮಾಜದ ನಿರ್ದೇಶಕರಾದ ಅಶ್ವಥನಾರಾಯಣ್, ಗ್ರಾಮಪಂಚಾಯಿತಿ ಸದಸ್ಯ ಕ್ರಷ್ಣಪ್ಪ, ಸ್ಥಳೀಯ ರೈತ ಮುಖಂಡ ಶಿವಣ್ಣ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

