ದೊಡ್ಡಬಳ್ಳಾಪುರ, (ಡಿ.06): ವಿಧಾನಸಭೆ ಚುನಾವಣೆ ಸಮೀಪದಲ್ಲಿರುವಂತೆ ರಾಜಕೀಯ ಪಕ್ಷಗಳು ತಾಲೂಕಿನಲ್ಲಿ ಸಕ್ರಿಯವಾಗಿದ್ದು, ಪಕ್ಷ ಸಂಘಟಿಸಲು, ಮತದಾರರನ್ನು ಸೆಳೆಯಲು ತಮ್ಮದೇ ಆದ ಕಸರತ್ತುಗಳನ್ನು ಮಾಡುತ್ತಿವೆ.
ಈ ಬೆನ್ನಲ್ಲೇ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅವರು, ಮತ್ತೆ ಗೂಡಿಗೆ ಎಂಬಂತೆ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ತಾಲೂಕಿನಾಧ್ಯಂತ ಸಂಚಲನ ಸೃಷ್ಟಿಸಿತ್ತು. ಅಲ್ಲದೆ ಮಧುರೆ ಹೋಬಳಿ ಹಿರಿಯ ಮುಖಂಡರಾದ ಸತ್ಯನಾರಾಯಣಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ವೇದಿಕೆಗಳಲ್ಲಿ ಕಂಡು ಬರುತ್ತಿರುವ ಹಿನ್ನಲೆಯಲ್ಲಿ, ನರಸಿಂಹಸ್ವಾಮಿ ಸಹ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬರುತ್ತಾರೆ ಎಂಬ ವಾತಾವರಣ ಉಂಟಾಗಿತ್ತು. ಆದರೆ ನರಸಿಂಹಸ್ವಾಮಿ ಅವರು ಈ ಮಾತುಗಳನ್ನು ತಳ್ಳಿಹಾಕಿದ್ದು, ಪ್ರಸ್ತುತ ಯಾವುದೇ ನಿರ್ಣಯ ಕೈಗೊಂಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು, ಇನ್ನೂ ಚುನಾವಣೆಗೆ ಸಮಯವಿದೆ. ಪ್ರಸ್ತುತ ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಕ್ಕೆ ಸೇರುವ ಯಾವುದೇ ನಿರ್ಣಯ ಕೈಗೊಂಡಿಲ್ಲ. ಕಾದು ನೋಡುವ ಎಂದಿದ್ದಾರೆ.
ಕೆಲವೆ ತಿಂಗಳುಗಳ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಜೆ.ನರಸಿಂಹಸ್ವಾಮಿ ಅವರು ಭೇಟಿಯಾಗಿದ್ದರು. ಆ ವೇಳೆ ನರಸಿಂಹಸ್ವಾಮಿ ಜೆಡಿಎಸ್ ಸೇರಲಿದ್ದಾರೆಂದು ಮಾತುಗಳು ತಾಲೂಕಿನಲ್ಲಿ ಹರಿದಾಡಿತ್ತು.
ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಲಸಿಗರು ಮತ್ತೆ ಮಾತೃ ಪಕ್ಷಕ್ಕೆ ಬರಲು ಬಾಗಿಲು ತೆರಿದಿದೆ ಎಂಬ ಹೇಳಿಕೆ ಹಿನ್ನಲೆಯಲ್ಲಿ ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿರುವ ಆರ್.ಜಾಲಪ್ಪ ಅವರ ಪುತ್ರ ಜೆ.ನರಸಿಂಹಸ್ವಾಮಿ ಅವರನ್ನು ಮತ್ತೆ ಪಕ್ಷಕ್ಕೆ ಕರೆ ತರುವುದಕ್ಕೆ ಕಾಂಗ್ರೆಸ್ನ ವಲಯದಲ್ಲಿ ಭಾರಿ ಪ್ರಯತ್ನ ಆರಂಭಗೊಂಡಿದೆ. ಅಲ್ಲದೆ ಅವರೊಂದಿಗೆ ಮಾತುಕತೆ ನಡೆಸಿದ್ದು, ಮತ್ತೆ ಮಾತೃ ಪಕ್ಷಕ್ಕೆ ನರಸಿಂಹಸ್ವಾಮಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.
ದೊಡ್ಡಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದ ನರಸಿಂಹಸ್ವಾಮಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ್ದರು. ಮಾತ್ರವಲ್ಲ ಬಿಜೆಪಿಯಿಂದ ಸ್ಪರ್ಧಿಸಿ ಮರು ಆಯ್ಕೆಗೊಂಡಿದ್ದರು. ಅವರಿಗೆ ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷಗಿರಿಯನ್ನು ನೀಡಲಾಗಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಅವರು ನಂತರದ ಚುನಾವಣೆಯಲ್ಲಿ ಸೋತಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

