ಗದಗ, (ಜುಲೈ.28); ಹೆಚ್ಚಾಗಿರುವ ಜನಸಂಖ್ಯೆ. ಜನರ ಬೇಡಿಕೆ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸುವ ಹೊಸ ಮೀಸಲಾತಿ ನೀತಿ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಅವರು ಇಂದು ಗದಗ ಎಪಿಎಂಸಿಯಲ್ಲಿರುವ ಕೆ.ಎಚ್.ಪಾಟೀಲ್ ಸಭಾಭವನದಲ್ಲಿ ಏರ್ಪಡಿಸಿದ್ದ ಪಂಚಮಸಾಲಿ ಸಮಾಜದ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈಗ ದೇಶದಲ್ಲಿ ಮೀಸಲಾತಿ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಎಲ್ಲ ಸಮುದಾಯಗಳು: ಮೀಸಲಾತಿ ಕೇಳುತ್ತಿವೆ. ಕಾರಣ ಶಿಕ್ಷಣ ಕಲಿತು ಜಾಗೃತರಾಗಿದ್ದಾರೆ. ನಮ್ಮ ಮಕ್ಕಳು ವಿದ್ಯಾವಂತರಾಗಿ ದೊಡ್ಡವರಾಗಬೇಕು ಎಂಬ ಆಸೆಯಿಂದ ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಆದರೆ, ಸಮಸ್ಯೆ ಇರುವುದು ಒಟ್ಟಾರೆ ಶೇ 50 ರಷ್ಟು ಮಾತ್ರ ಮೀಸಲಾತಿ ನೀಡಲು ಅವಕಾಶ ಇದೆ. ಬೆಳೆದಿರುವ ಜನಸಂಖ್ಯೆ ಹೆಚ್ಚಾಗಿರುವ ಜನರ ಬೇಡಿಕೆ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲ ಸಮುದಾಯಗಳ ಅಶೋತ್ತರಗಳನ್ನು ಈಡೇರಿಸುವಂತೆ ಮೀಸಲಾತಿ ನೀತಿ ಜಾರಿಗೆ ತರುವುದು ಅವಶ್ಯಕತೆ ಇದೆ. ಹೀಗಾಗಿ ಈ ವಿಚಾರವನ್ನು ಮುಂದಿನ ದಿನಗಳಲ್ಲಿ ಸಂಸತ್ನಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ನಾನು ಅಧಿಕಾರದಲ್ಲಿ ಇದ್ದಾಗ ಎಸ್ಸಿ ಸಮುದಾಯದ ಮೀಸಲಾತಿ ಶೇ 15 ರಿಂದ ಶೇ 17, ಎಸ್ಪಿ ಸಮುದಾಯದ ಮೀಸಲಾತಿ ಪ್ರಮಾಣ ಶೇ 3 ರಿಂದ ಶೇ 7ಕ್ಕೆ ಹೆಚ್ಚಳ ಮಾಡಿದ್ದೇವು. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಶೇ 2ರಷ್ಟು ಹೆಚ್ಚಳ ಮಾಡಿದೆವು. ಆದರೆ, ಮತ್ತೆ ಶೇ 50 % ಮೀಸಲಾತಿ ಮಿತಿ ಇರುವುದರಿಂದ ಕಾನೂನು ಸಂಘರ್ಷ ಏರ್ಪಟ್ಟಿದೆ. ನಾವು ಏನು ಮಾತನಾಡಿದ್ದೇವೆ ಅದರಂತೆ ನಡೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಸಮಾಜಕ್ಕೆ ನ್ಯಾಯ ಕೊಡಿಸಲು ದಿಟ್ಟ ಹೋರಾಟ ಆಗತ್ಯವಿದೆ. ಅದಕ್ಕಾಗಿ ನಾನು ಸಿದ್ದನಿದ್ದೇನೆ ಎಂದರು.
ಬಸವಣ್ಣನವರು ಕಾಯಕವೇ ಕೈಲಾಸ ಅಂತ ಹೇಳಿದ್ದಾರೆ. ನಾವೆಲ್ಲರೂ ಮಾತಿಗಿಂತ ಕೃತಿ ಮೇಲು ಎಂದು ನಂಬಿದವರು. ಬರುವ ದಿನಗಳಲ್ಲಿ ಸಮಾಜವನ್ನು ಶೈಕಣೀಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢಗೊಳಿಸುವ ಕೆಲಸ ಮಾಡಬೇಕು. ಪ್ರತಿಯೊಬ್ಬರು ಕೂಡ ಸಮೃದ್ಧಿ ಸಂತೋಷದಿಂದ ಬಾಳಬೇಕೆಂದರೆ ಈಗಿನಿಂದಲೇ ಬೀಜ ಬಿತ್ತಿ ನಿರಂತರ ಪಯತ್ನ ಮಾಡಬೇಕು. ಸಮಾಜ ಕಟ್ಟುವ ಕೆಲಸ ಅಂದರೆ ನಿರಂತರ ಕೆಲಸ ಮಾಡಬೇಕು. ಮಾತಿನ ಮಂಟಪದಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ. ಮಾತುಗಳು ನಮಗೆ ಸ್ಫೂರ್ತಿಯಾಗಬೇಕು. ಆ ಮಾತಿನಂತೆ ಕೆಲಸ ಮಾಡಿದರೆ ನಾವು ಗುರಿ ಮುಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಪಂಚಮಸಾಲಿ ಸಂಘ ಹುಟ್ಟು ಹಾಕಿರುವುದು ಒಳ್ಳೆಯ ದಾರಿಯಲ್ಲಿ ನಡೆಯುತ್ತಿದೆ. ಪಂಚಮಸಾಲಿ ಸಮುದಾಯ ರೈತಾಪಿ ವರ್ಗದಿಂದ ಕೂಡಿರುವ ಸಮಾಜ. ಒಕ್ಕಲುತವನ್ನು ನಂಬಿರುವ ಸಮಾಜ, ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಭೂಮಿ ಮಾತ್ರ ಅಷ್ಟೇ ಇದೆ. ಮೊದಲು ಒಂದು ಮನೆಯಲ್ಲಿ ನಾಲ್ಕು ಜನ ಮಕ್ಕಳಿದ್ದರು. ಆದರೆ, ಈಗ ಅವರಿಗೆ ಮಕ್ಕಳಾಗಿದ್ದಾರೆ. ಆದರೆ, ಭೂಮಿ ಮಾತ್ರ ಅಷ್ಟೇ ಇದೆ. ಹೀಗಾಗಿ ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಕೆಲಸ ಮಾಡಬೇಕು. ನಮ್ಮ ಮಕ್ಕಳು ಬುದ್ದಿವಂತಿಕೆಯಲ್ಲಿ ಕಡಿಮೆಯಿಲ್ಲ. ಅವರಿಗೆ ಸೂಕ್ತ ತರಬೇತಿ ನೀಡಿದರೆ, ಜಗತ್ತಿನಲ್ಲಿ ಅವರು ಎಲ್ಲವನ್ನೂ ಸಾಧಿಸುತ್ತಾರೆ. ಸರ್ಕಾರಗಳು ಅನೇಕ ಯೋಜನೆಗಳನ್ನು ಹಾಕಿಕೊಳ್ಳುತ್ತವೆ. ಅವುಗಳನ್ನು ನಮ್ಮ ಸಮಾಜದ ಗ್ರಾಮೀಣ ಭಾಗದ ಮಕ್ಕಳಿಗೆ ತಲುಪಿಸುವ ಜವಾಬ್ದಾರಿಯನ್ನು ಸಮಾಜ ತೆಗೆದುಕೊಳ್ಳಬೇಕು ಎಂದರು.
ಒಂದು ಕಾಲದಲ್ಲಿ ಜಮೀನು ಇದ್ದವರು ಜಗತ್ತು ಆಳುತ್ತಿದ್ದರು. ನಂತರ ಹಣ ಇದ್ದವರು ಜಗತ್ತು ಆಳಿದರು. ಇದು 21ನೇ ಶತಮಾನ ಈಗ ಜ್ಞಾನ ಇದ್ದವರ ಕಾಲ, ಯಾರ ಬಳಿ ಜ್ಞಾನ ಇದೆ ಅವರು ಜಗತ್ತು ಆಳುತ್ತಾರೆ. ಹೇಗೆ ಜಗತ್ತು ಬದಲಾಗುತ್ತದೆ ಹಾಗೇ ನಮ್ಮ ಮಕ್ಕಳು ಬದಲಾವಣೆಗೆ ಹೊಂದಿಕೊಂಡರೆ ಆರ್ಥಿಕವಾಗಿ ಯಾವುದೇ ತೊಂದರೆಯಾಗುವುದಿಲ್ಲ. ಆ ನಿಟ್ಟಿನಲ್ಲಿ ನಮ್ಮ ಪಯತ್ನ ಇರಬೇಕು ಎಂದರು.
ಪ್ರಜಾಪಭುತ್ವ ಯಶಸ್ವಿಯಾಗಬೇಕೆಂದರೆ ಸಂಘಟಿತ ಹೋರಾಟ ಅಗತ್ಯವಿದೆ. ಕೆಲವರು ಜಾತಿ ಮಾಡುತ್ತಾರೆ ಎಂದು ಹೇಳುತ್ತಾರೆ. ದೇಶದ 140 ಕೋಟಿ ಜನರನ್ನು ಅಭಿವೃದ್ಧಿ ಮಾಡುವುದು ಹೇಗೆ. ಆಯಾ ಸಮಾಜಗಳು ಸಂಘಟಿತವಾಗಿ ಬೆಳೆದರೆ, ಇಡೀ ದೇಶ ಜಾಗೃತಗೊಂಡು ದೇಶ ಬೆಳೆಯುತ್ತದೆ. ಪಂಚಮಸಾಲಿ ಸಮುದಾಯ ಈಗ ಜಾಗೃತವಾಗಿದೆ. ಈ ಸಮಾಜದ ಜೊತೆಗೆ ನಾನು ಯಾವಾಗಲೂ ಇರುತ್ತೇನೆ. ನಿಮ್ಮ ಸಹೋದರ ದೆಹಲಿಯಲ್ಲಿ ನಿಮ್ಮ ಪರವಾಗಿದ್ದಾನೆ ಎಂದು ಹೇಳಿದರು.
ಮಾಜಿ ಸಚಿವರು ಹಾಗೂ ಶಾಸಕರಾದ ಸಿ. ಸಿ ಪಾಟೀಲರು ಜನಪರ ಶಾಸಕರು ಅವರು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ಜನಪರ ಕೆಲಸ ಮಾಡುತ್ತಾರೆ. ಅವರ ಶಕ್ತಿಯನ್ನು ಸಮಾಜ ಬಳಕೆ ಮಾಡಿಕೊಳ್ಳಬೇಕು. ನಾವು ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಸ್ವಾಮೀಜಿ, ಸಚಿವರಾದ ಎಚ್.ಕೆ. ಪಾಟೀಲ್, ಮಾಜಿ ಸಚಿವ ಸಿ.ಸಿ. ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

