ನವದೆಹಲಿ, ( ಸೆ.27): ಹಿರಿಯ ನಟಿ ವಹೀದಾ ರೆಹಮಾನ್ (85 ವರ್ಷ) ಅವರು ಭಾರತೀಯ ಸಿನಿಮಾಕ್ಷೇತ್ರದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದೇಶದ ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿರುವ ವಹೀದಾ 1956ರಲ್ಲಿ ತೆರೆಕಂಡ ದೇವಾನಂದ್ ಅವರ ಸಿಐಡಿ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿ ಮನೆಮಾತಾಗಿದ್ದರು.
ಫಾಲ್ಕೆ ಪ್ರಶಸ್ತಿಗೆ ವಹೀದಾ ಆಯ್ಕೆಯಾಗಿರುವ ಬಗ್ಗೆ ಟ್ವಿಟ್ ಮಾಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ‘ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡು ಗೆಗಾಗಿ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ಈ ವರ್ಷದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಘೋಷಿಸಲು ನನಗೆ ಅಪಾರ ಸಂತೋಷವಾಗುತ್ತಿದೆ’ ಎಂದಿದ್ದಾರೆ.
ಕಳೆದ ಸಾಲಿನಲ್ಲಿನಟ ರಜನೀಕಾಂತ್ ಅವರು ಫಾಲ್ಕೆ ಪ್ರಶಸ್ತಿ ಪಡೆದಿದ್ದರು.
ಅನೇಕ ಹಿಟ್ ಚಿತ್ರಗಳ ನಾಯಕಿ: ವಹೀದಾ ಸಿಐಡಿ ಅಲ್ಲದೆ, ಪ್ಯಾಸಾ, ಗೈಡ್, ಕಾಗಜ್ ಕೆ ಫೂಲ್, ಖಾಮೋಶಿ, ಕಭಿ ಕಭೀ, ಪ್ರೇಮ್ ಪೂಜಾರಿ ಮತ್ತು ತ್ರಿಶೂಲ್ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಹೆಚ್ಚು ಗುರುತಿಸಿಕೊಂಡಿದ್ದಾರೆ.
1971ರಲ್ಲಿ ತೆರೆಕಂಡ ರೇಷ್ಮಾ ಮತ್ತು ಶೇರಾ ಚಿತ್ರದ ತಮ್ಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿ ರುವ ವಹೀದಾ ಪದ್ಮಶ್ರೀ ಮತ್ತು ಪದ್ಮ ಭೂಷಣ ಗೌರವಗಳನ್ನೂ ಸ್ವೀಕರಿಸಿದ್ದಾರೆ. ಅಲ್ಲದೇ ನಟಿಯು 5 ದಶಕಗಳಲ್ಲಿ ಒಟ್ಟು 90 ಸಿನಿಮಾಗಳಲ್ಲಿ ನಟಿಸಿದ್ದಾರೆ. 2021ರಲ್ಲಿ ತೆರೆಕಂಡ ‘ಸ್ಟೇಟರ್ ಗರ್ಲ್’ ಅವರ ಕೊನೆಯ ಸಿನಿಮಾ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಟಿ ವಹೀದಾ ರೆಹಮಾನ್ ಅವರು, ನನಗೆ ಇಂದು ಡಬಲ್ ಖುಷಿಯಾ ಗುತ್ತಿದೆ. ಏಕೆಂದರೆ ಇಂದು ನನ್ನ ಮಾರ್ಗದರ್ಶಕರಾಗಿರುವ ಹಾಗೂ ನಾನು ಮೊದಲ ಚಿತ್ರದ ನಾಯಕ ನಟ ದೇವಾನಂದ್ ಅವರ 100ನೇ ಜನ್ಮದಿನವಾಗಿದೆ. ಈ ಪ್ರಶಸ್ತಿ ಅವರಿಗೇ ಸಲ್ಲಬೇಕಿತ್ತು. ಆದರೆ ನನಗೆ ದೊರೆತಿದೆ. ಗೌರವಕ್ಕಾಗಿ ಭಾರತ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….