ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಈ ಬಾರಿಯ ಗುರು ಪೂರ್ಣಿಮೆಯನ್ನು ಜುಲೈ 3 ರಂದು ಸೋಮವಾರ ಆಚರಿಸಲಾಗುವುದು.
ಗುರು ಪೂರ್ಣಿಮೆಯ ದಿನದಂದು ಗುರುವಿನ ಆಶೀರ್ವಾದದಿಂದ ಸಂಪತ್ತು, ಸುಖ, ಶಾಂತಿ, ಸಮೃದ್ಧಿಯ ವರವನ್ನು ಪಡೆಯಬಹುದು ಎನ್ನಲಾಗುತ್ತದೆ. ವೇದವ್ಯಾಸರು ಈ ದಿನ ಜನಿಸಿದರು, ಆದ್ದರಿಂದ ಇದನ್ನು ವ್ಯಾಸ ಪೂರ್ಣಿಮೆ ಎಂದೂ ಸಹ ಕರೆಯುತ್ತಾರೆ.
ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮೆಯ ವಿಶೇಷ ಮಹತ್ವದ ಬಗ್ಗೆ ಹೇಳಲಾಗಿದೆ. ಗುರುವಿನ ಸ್ಥಾನ ಶ್ರೇಷ್ಠ ಎಂಬ ನಂಬಿಕೆ ಹಿಂದೂ ಧರ್ಮದ್ದು. ದೇವರಿಗಿಂತ ಗುರುವನ್ನು ಉನ್ನತ ಸ್ಥಾನದಲ್ಲಿ ಕಾಣಲಾಗುತ್ತದೆ. ಏಕೆಂದರೆ ಒಬ್ಬ ವ್ಯಕ್ತಿಯನ್ನು ಅಜ್ಞಾನದ ಅಂಧಕಾರದಿಂದ ಹೊರತರುವ ಮೂಲಕ ಆತನಿಗೆ ಸರಿಯಾದ ಮಾರ್ಗವನ್ನು ತೋರಿಸುವವನೇ ಗುರು. ಈ ಬಾರಿ ಗುರು ಪೂರ್ಣಿಮೆಯ ದಿನದಂದು ವಿಶೇಷ ಯೋಗವೂ ರೂಪುಗೊಳ್ಳುತ್ತಿದೆ.
ಗುರು ಪೂರ್ಣಿಮಾ 2023 ಶುಭ ಸಮಯ: ಗುರು ಪೂರ್ಣಿಮಾ ಶುಭ ದಿನ: 2023 ರ ಜುಲೈ 3 ರಂದು ಸೋಮವಾರ ಗುರು ಪೂರ್ಣಿಮಾ ಪ್ರಾರಂಭ: 2023 ರ ಜುಲೈ 2 ರಂದು ಭಾನುವಾರ ರಾತ್ರಿ 8:21 ರಿಂದ ಗುರು ಪೂರ್ಣಿಮಾ ಮುಕ್ತಾಯ: 2023 ರ ಜುಲೈ 03 ರಂದು ಸಂಜೆ 05:08 ರವರೆಗೆ.
ಗುರು ಪೂರ್ಣಿಮಾ 2023 ಶುಭ ಯೋಗ: ಗುರು ಪೂರ್ಣಿಮೆಯ ದಿನದಂದು ಈ ಬಾರಿ ಹಲವು ಶುಭ ಯೋಗಗಳು ಸೃಷ್ಟಿಯಾಗಲಿವೆ. ಈ ದಿನ ಬ್ರಹ್ಮಯೋಗ ಮತ್ತು ಐಂದ್ರ ಯೋಗವು ರೂಪುಗೊಳ್ಳುತ್ತವೆ. ಅದೇ ಸಮಯದಲ್ಲಿ, ಬುಧಾದಿತ್ಯ ಯೋಗವೂ ಸಹ ಸೂರ್ಯ ಮತ್ತು ಬುಧ ಸಂಯೋಜನೆಯಿಂದ ರೂಪುಗೊಳ್ಳುತ್ತದೆ. ಜುಲೈ 02 ರಂದು ಸಂಜೆ 07.26 ರಿಂದ ಜುಲೈ 03 ರ ಮಧ್ಯಾಹ್ನ 03.45 ನಿಮಿಷಗಳವರೆಗೆ ಬ್ರಹ್ಮಯೋಗ ಇರುತ್ತದೆ. ಇಂದ್ರ ಯೋಗವು ಜುಲೈ 03 ರಂದು ಮಧ್ಯಾಹ್ನ 03.45 ಕ್ಕೆ ಪ್ರಾರಂಭವಾಗಿ ಜುಲೈ 04 ರಂದು ಬೆಳಿಗ್ಗೆ 11.50 ಕ್ಕೆ ಸಮಾಪ್ತಿ ಹೊಂದಲಿದೆ.
ಗುರು ಪೂರ್ಣಿಮಾ ಮಹತ್ವ: ಮಹರ್ಷಿ ವೇದವ್ಯಾಸರು ಗುರು ಪೂರ್ಣಿಮೆಯ ದಿನದಂದು ಜನಿಸಿದರು ಎನ್ನುವ ನಂಬಿಕೆಯಿದೆ. ಸನಾತನ ಧರ್ಮದಲ್ಲಿ, ಮಹರ್ಷಿ ವೇದ ವ್ಯಾಸರು ಮೊದಲ ಗುರು ಸ್ಥಾನವನ್ನು ಪಡೆದಿದ್ದಾರೆ. ಏಕೆಂದರೆ ಅವರು ಮಾನವ ಜನಾಂಗಕ್ಕೆ ವೇದಗಳನ್ನು ಕಲಿಸಿದವರಾಗಿದ್ದಾರೆ. ಇದಲ್ಲದೇ, ಮಹರ್ಷಿ ವೇದ ವ್ಯಾಸರು ಶ್ರೀಮದ್ ಭಾಗವತ, ಮಹಾಭಾರತ, ಬ್ರಹ್ಮಸೂತ್ರ, ಮೀಮಾಂಸಗಳನ್ನು ಹೊರತುಪಡಿಸಿ 18 ಪುರಾಣಗಳ ಕರ್ತೃ ಎಂದು ಪರಿಗಣಿಸಲಾಗಿದೆ. ಮಹರ್ಷಿ ವೇದವ್ಯಾಸರಿಗೆ ಆದಿ ಗುರುವಿನ ಸ್ಥಾನಮಾನ ನೀಡಲು ಮತ್ತು ಗುರು ಪೂರ್ಣಿಮೆಯ ದಿನದಂದು ಮಹರ್ಷಿ ವೇದವ್ಯಾಸರನ್ನು ವಿಶೇಷವಾಗಿ ಪೂಜಿಸಲೂ ಇದು ಕಾರಣವಾಗಿದೆ.
ಗುರು ಪೂರ್ಣಿಮಾ ಪೂಜೆ ಸಾಮಗ್ರಿಗಳು: ವೀಳ್ಯದೆಲೆ, ಹಳದಿ ಬಟ್ಟೆ, ಹಳದಿ ಸಿಹಿತಿಂಡಿಗಳು, ತೆಂಗಿನಕಾಯಿ, ಹಳದಿ ಹೂವುಗಳು ಇತ್ಯಾದಿಗಳೊಂದಿಗೆ ಏಲಕ್ಕಿ, ಕರ್ಪೂರ, ಲವಂಗ ಇತ್ಯಾದಿಗಳನ್ನು ಇಂದು ಪೂಜಾ ಸಾಮಗ್ರಿಗಳಲ್ಲಿ ಬಳಸಲಾಗುವುದು. ಈ ಪದಾರ್ಥಗಳು ಇಲ್ಲದಿದ್ದರೆ, ಪೂಜೆಯು ಅಪೂರ್ಣವೆಂದು ಪರಿಗಣಿಸಲ್ಪಡುತ್ತದೆ.
ಗುರು ಪೂರ್ಣಿಮಾ ಪೂಜೆ ವಿಧಾನ: ಗುರು ಪೂರ್ಣಿಮಾದಂದು ಗುರುವನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನದಂದು ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ.ಮನೆಯಲ್ಲಿರುವ ದೇವರುಗಳನ್ನು ನಿಯಮಾನುಸಾರ ಪೂಜಿಸಿ. ಪೂಜಾ ಸ್ಥಳದಲ್ಲಿ ನಿಮ್ಮ ಗುರುಗಳ ಚಿತ್ರಕ್ಕೆ ಮಾಲೆಯನ್ನು ಅರ್ಪಿಸಿ ಮತ್ತು ಅವರಿಗೆ ತಿಲಕವನ್ನು ಅನ್ವಯಿಸಿ. ನಂತರ ನಿಮ್ಮ ಗುರುಗಳ ಮನೆಗೆ ತೆರಳಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯಿರಿ.
ಗುರುವಿಲ್ಲದಿದ್ದರೆ ಏನು ಮಾಡಬೇಕು..?: ಗುರು ಪೂರ್ಣಿಮೆಯ ದಿನದಂದು ಗುರುಗಳನ್ನು ಪೂಜಿಸುವುದು ಗುರುವಿನ ಅನಂತ ಅನುಗ್ರಹವನ್ನು ಕರುಣಿಸುತ್ತದೆ. ನೀವು ಗುರು ಪೂರ್ಣಿಮೆಯ ದಿನದಂದು ನಿಮ್ಮ ಗುರುಗಳ ಪಾದಗಳನ್ನು ಸ್ಪರ್ಶಿಸಿ ಮತ್ತು ಅವರ ಆಶೀರ್ವಾದವನ್ನು ಪಡೆದುಕೊಳ್ಳುವುದು ತುಂಬಾನೇ ಮುಖ್ಯ. ಒಂದು ವೇಳೆ ನಿಮ್ಮ ಗುರು ನಿಮ್ಮೊಂದಿಗೆ ಇಲ್ಲದಿದ್ದರೆ ಅಥವಾ ಅವರು ಇರುವಲ್ಲಿಗೆ ಹೋಗಿ ಆಶೀರ್ವಾದವನ್ನು ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ ನಿಮ್ಮ ಜೀವನದಲ್ಲಿ ಯಾರಾದರೂ ನಿಮ್ಮ ಜೀವನದ ಅಂಧಕಾರವನ್ನು ದೂರಾಗಿಸಿ ಜ್ಞಾನದ ಬೆಳಕನ್ನು ಹರಿಸಿದ್ದರೆ, ನಿಮ್ಮ ಜೀವನದಲ್ಲಿ ಬೆಳಕು ಮೂಡುವಂತಹ ಕೆಲಸ ಮಾಡಿದ್ದರೆ ನೀವು ಈ ದಿನ ಅವರ ಪೂಜೆಯನ್ನು ಮಾಡಬಹುದು.
ವಿಶೇಷ ಪೂಜೆ: ದೊಡ್ಡಬಳ್ಳಾಪುರ ನಗರದ ರಂಗಪ್ಪ ಸರ್ಕಲ್ ಬಳಿಯಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜುಲೈ 3 ರಂದು ಗುರುಪೌರ್ಣಿಮಾ ಅಂಗವಾಗಿ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಇದರ ಅಂಗವಾಗಿ ಬೆಳಿಗ್ಗೆ ಸುಗಂಧ ದ್ರವ್ಯಾಭಿಷೇಕ, ನಂತರ ದೇವಾಲಯದಲ್ಲಿ ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ಹಾಗೂ ಧೂಪಾರತಿ, ಸಾಯಿ ಭಜನೆ ಕಾರ್ಯಕ್ರಮಗಳಿವೆ.
ನಗರದ ರೇಲ್ವೆ ನಿಲ್ದಾಣದ ಸಮೀಪ ಬೆಸೆಂಟ್ ಪಾರ್ಕ್ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಗುರುಪೌರ್ಣಿಮಾ ಮಹೋತ್ಸವ ಅಂಗವಾಗಿ ಕಾಕಡ ಆರತಿ, ಪನ್ನೀರು ಅಭಿಷೇಕ ಕ್ಷೀರಾಭಿಷೇಕ ವಿಶೇಷ ಪೂಜೆ ಹಾಗೂ ಭಜನೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಲಿವೆ.
ವಿಶೇಷ ವರದಿ: ಗಣೇಶ್. ಎಸ್., ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….