ದೊಡ್ಡಬಳ್ಳಾಪುರ, (Doddaballapura): ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದಿದ್ದು, ನಿರ್ವಹಣೆ ಮಾಡಬೇಕಾದ ಗುತ್ತಿಗೆದಾರರು ಪರಾರಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಈ ಮಾಹಿತಿ ಬಯಲಾಗಿದೆ.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ರಾಜಣ್ಣ ಈ ಕುರಿತು ಮಾಹಿತಿ ಹೊರಹಾಕಿದ್ದು, ತಾಲ್ಲೂಕಿನಲ್ಲಿ 245 ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ. ಇವುಗಳ ಪೈಕಿ 20 ಘಟಕಗಳು ದುರಸ್ಥಿಯಾಗಿದೆ ಕೆಟ್ಟು ನಿಂತಿವೆ. ಇವುಗಳನ್ನು ದುರಸ್ಥಿ ಮಾಡುವಂತೆ ಹಲವಾರು ಬಾರಿ ಸೂಚನೆ ನೀಡಿದ್ದರು ಸಹ ಗುತ್ತಿಗೆದಾರರು ಸ್ಪಂದಿಸುತ್ತಿಲ್ಲ.
20 ಘಟಕಗಳ ಗುತ್ತಿಗೆದಾರರು ತಲೆಮರೆಸಿಕೊಂಡಿದ್ದಾರೆ. ಈ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಗುತ್ತಿಗೆ ಡಿಸೆಂಬರ್ನಲ್ಲಿ ಮುಕ್ತಾಯವಾಗುತ್ತಿವೆ. ಇವುಗಳನ್ನು ಸೂಕ್ತ ರೀತಿಯಲ್ಲಿ ದುರಸ್ಥಿ ಮಾಡಿಸಿ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಿಕೊಡಲಾಗುವುದು ಎಂದಿದ್ದಾರೆ.
ಆದರೆ ಏಕಾಏಕಿ 20 ಗುತ್ತಿಗೆದಾರರು ಪರಾರಿಯಾಗಿರುವ ಮಾಹಿತಿ ಆಶ್ಚರ್ಯಕ್ಕೆ ಕಾರಣಾವಾಗಿದ್ದು, ಸೂಕ್ತ ದಾಖಲೆ ಪಡೆಯದೆ ಅಧಿಕಾರಿಗಳಿಗೆ ಗುತ್ತಿಗೆ ನೀಡಲು ಒತ್ತಡ ಹೇರಿದವರು ಯಾರು..?, ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸುವಾಗ ಹಣ ಸಂಗ್ರಹಿಸಿ, ದುರಸ್ತಿಗೆ ಬಂದಾಗ ಪರಾರಿಯಾದರೆ ಇದರ ಹೊಣೆ ಹೊರುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)