ಭಟ್ಕಳ: ಕೋಲಾರ ಜಿಲ್ಲೆಯ ಕೊತ್ತೂರಿನಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ (school trip) ಬಂದಿದ್ದ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರಲ್ಲಿ ನಾಲ್ವರು ನೀರಿನಲ್ಲಿ ನಾಪತ್ತೆಯಾಗಿದ್ದಾರೆ.
ಒಟ್ಟು 7 ಜನರು ಸಮುದ್ರಕ್ಕೆ ತೆರಳಿದ್ದು ಇವರು ಅಲೆಗೆ ಸಿಲುಕಿದಾಗ ಮೂವರನ್ನು ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಉಳಿದಂತೆ ಓರ್ವಳ ಶವ ಪತ್ತೆಯಾಗಿದ್ದು, ಇನ್ನೂ ಮೂವರಿಗಾಗಿ ಹುಡುಕಾಟ ನಡೆದಿದೆ.
ಮಂಗಳವಾರ ಸಂಜೆ ಕೋಲಾರದ ಮುಳಬಾಗಿಲಿನ ಕೊತ್ತೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ ಬಂದಿದ್ದರು. ಸಂಜೆ ಸಮುದ್ರದಂಚಿನಲ್ಲಿ ಆಟವಾಡುತ್ತಿರುವಾಗ ಓರ್ವ ವಿದ್ಯಾರ್ಥಿನಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದು ಇನ್ನೂ ಮೂವರು ಪತ್ತೆಯಾಗಿಲ್ಲ ಎನ್ನಲಾಗಿದೆ.
ಸಮುದ್ರದ ಅಲೆ ಹೊಡೆತಕ್ಕೆ ಆಳ ಸಮುದ್ರದಲ್ಲಿ ಕಣ್ಮರೆಯಾಗಿದ್ದು ಮುರುಡೇಶ್ವರ ಪಿಎಸ್ಐ ಹಣಮಂತ ಬಿರಾದಾರ ನೇತೃತ್ವದಲ್ಲಿ ಕರಾವಳಿ ಪೊಲೀಸ್ ಪಡೆ ಹುಡುಕಾಟ ಆರಂಭಿಸಿದೆ.
ಸಹಾಯಕ ಆಯುಕ್ತ ಡಾ.ನಯನಾ ಎನ್. ಹಾಗೂ ತಹಶೀಲ್ದಾರ್ ಅಶೋಕ ಭಟ್ಟ ಮುರ್ಡೇಶ್ವರದ ಆರ್. ಎನ್.ಎಸ್. ಆಸತ್ರೆಗೆ ಭೇಟಿ ನೀಡಿ ತೀವ್ರ ಅಸ್ವಸ್ಥಗೊಂಡಿದ್ದ ಮೂವರು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ, ಉಳಿದವರಿಗೆಲ್ಲ ವಸತಿ ಸೇರಿ ಅಗತ್ಯ ವ್ಯವಸ್ಥೆ ಕಲ್ಪಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಸಮೃದ್ದಿ ಮಂಜುನಾಥ್, ಮುಳಬಾಗಿಲು ತಾಲ್ಲೂಕು, ಕೊತ್ತೂರು(ಬಾಲಸಂದ್ರ) ಮೊರಾರ್ಜಿ ದೇಸಾಯಿ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸದದಲ್ಲಿ ಮುರುಡೇಶ್ವರ ಸಮುದ್ರದ ಬಳಿ 4 ಮಕ್ಕಳು ಸಮುದ್ರದ ನೀರಿನಲ್ಲಿ ಅನಾಹುತವಾಗಿರುವ ಸುದ್ಧಿ ತಿಳಿದುಬಂದಿದೆ ಸ್ಥಳೀಯ ಸಂಭಂದಿಸಿದ ಅಧಿಕಾರಿಗಳೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದು ಪೋಷಕರು ಯಾವುದೇ ರೀತಿಯ ಗೊಂದಲಕ್ಕೊಳಗಾಗದೇ ಧೈರ್ಯದಿಂದಿರಲು ಪ್ರಾರ್ಥಿಸುತ್ತೇನೆ..
ಪೋಲೀಸ್ ಇಲಾಖೆಯವರೊಂದಿಗೆ ಸಂಪರ್ಕಿಸಿ ಸಂಪೂರ್ಣ ಮಾಹಿತಿ ಪಡೆಯಲಾಯಿತು ನಾಪತ್ತೆಯಾಗಿರುವ 3 ಮಕ್ಕಳಿಗಾಗಿ ಶೋಧ ಕಾರ್ಯನಡೆಯುತ್ತಿದ್ದೆ.
ಸ್ಥಳದಲ್ಲಿಯೇ ನಮ್ಮ ಹಳೆಯ SP ರವರು ಈಗಿನ ಕಾರವಾರದ ಪೋಲೀಸ್ ವರಿಷ್ಠಾಧಿಕಾರಿಗಳು ಶ್ರೀ ನಾರಾಯಣ್ ಸರ್ ರವರು ಸಹ ಸ್ಥಳದಲ್ಲಿದ್ದು ಶೋಧ ಕಾರ್ಯವನ್ನು ಪರಿವೇಕ್ಷಿಸುತ್ತಿದ್ದಾರೆ.
ಒಟ್ಟು 3 ಮಕ್ಕಳು ಗಾಯಾಳುಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದು 1ಮಗು ಪ್ರಾಣಕಳೆದುಕೊಂಡಿರುವುದು ತಿಳಿದು ನೋವಾಗಿದೆ..
ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಪೋಷಕರು ಧೈರ್ಯದಿಂದಿರಲೂ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಮುರುಡೇಶ್ವರದಲ್ಲಿ ನಡೆದ ಘಟನೆ ತುಂಬ ಮನಸ್ಸಿಗೆ ಘಾಸಿಯಾಗಿದ್ದು ಪೋಷಕರಿಗೆ ಮುಳಬಾಗಿಲಿನಿಂದ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಖುದ್ಧ ಸ್ಥಳಕ್ಕೆ ಭೇಟಿ ಮಾಡಲಿದ್ದೇನೆ. ಸಂಪೂರ್ಣ ಸಹಕಾರ ನೀಡುವಂತೆ ಈಗಾಗಲೇ ಅಧಿಕಾರಿಗಳಲ್ಲಿ ಕೋರಲಾಗಿದೆ.
ನೋವಿನ ಸಮಯದಲ್ಲಿ ತಾಳ್ಮೆ ಮತ್ತು ಧೈರ್ಯ ಅತಿಮುಖ್ಯವಾಗುತ್ತೆ. ಪೋಷಕರಲ್ಲಿ ವಿನಮ್ರದಿಂದ ಮನವಿ ಮಾಡುತ್ತೇನೆ ನಾನು ನಿಮ್ಮೊಂದಿಗಿರುತ್ತೇನೆ ಧೈರ್ಯದಿಂದಿರಿ ಎಂದು ಮನವಿ ಮಾಡಿದ್ದಾರೆ.