ದೊಡ್ಡಬಳ್ಳಾಪುರ: ಸರ್ಕಾರ ಜೋಳ, ರಾಗಿ ಖರೀದಿ ಕೇಂದ್ರಗಳನ್ನು ಶೀಘ್ರವಾಗಿ ತೆರೆದು ರೈತರ ನೆರವಿಗೆ ಬರಬೇಕಿದೆ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ತಾಲೂಕು ಕಚೇರಿ ಆವರಣದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ತಾಲೂಕು ಕಚೇರಿ ಆವರಣದಲ್ಲಿ ಜೋಳವನ್ನು ಸುರಿದು ಗಮನ ಸೆಳೆದ ರೈತರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ, ಬೆಂಬಲ ಬೆಲೆ ಘೋಷಣೆ ಬಗ್ಗೆ ಸಮರ್ಪಕ ಉತ್ತರ ನೀಡುವವರೆಗೂ ಧರಣಿ ಮುಂದುವರೆಸಲಾಗುವುದು ಎಂದು ಪಟ್ಟು ಹಿಡಿದಿದ್ದಾರೆ.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ , ತಾಲೂಕು ಅಧ್ಯಕ್ಷ ಹನುಮೇಗೌಡ ಈ ಸಂದರ್ಭದಲ್ಲಿ ಮಾತನಾಡಿ, ರಾಜ್ಯದ ವಿವಿಧ ಭಾಗಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿ, ರೈತರು ಬೆಳೆದಿದ್ದ ಜೋಳ ಹಾಗೂ ರಾಗಿ ಉತ್ತಮವಾಗಿ ಫಸಲು ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ರೈತ ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆಯಿಲ್ಲದಂತಾಗಿದೆ. ಈ ಹಂಗಾಮಿನಲ್ಲಿ ಕಟಾವು ಆರಂಭವಾಗಿದ್ದು, ಸರ್ಕಾರ ಘೋಷಿಸಿರುವ ರಾಗಿಗೆ ಕ್ವಿಂಟಾಲ್ ಒಂದಕ್ಕೆ 3295 ರೂ ಹಾಗೂ ಜೋಳಕ್ಕೆ ಕ್ವಿಂಟಾಲ್ ಒಂದಕ್ಕೆ 1850 ರೂ ಗಳ ಬೆಂಬಲ ಬೆಲೆ ಪ್ರಕಾರ ಖರೀದಿ ಕೇಂದ್ರವನ್ನು ತೆರೆಯಬೇಕಿದೆ.
ಕೇಂದ್ರ ಸರ್ಕಾರ 14 ಪ್ರಮುಖ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಿಸುತ್ತೇವೆ ಎಂದು ಹೇಳಿರುವುದು ಕೇವಲ ಆದೇಶಗಳಿಗಷ್ಟೇ ಸೀಮಿತವಾಗಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವ ಮುನ್ನ ಸರ್ಕಾರ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಧಾವಿಸಬೇಕಿದೆ. ಇಲ್ಲವಾದಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್, ತಾಲೂಕು ಉಪಾಧ್ಯಕ್ಷ ರವಿ ಶಿರವಾರ, ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್, ರೈತ ಮುಖಂಡರಾದ ವಸಂತ್ ಕುಮಾರ್, ಶಿವರಾಜ್, ಹರೀಶ, ಬೈರೇಗೌಡ, ಸೀಗೆಹಳ್ಳಿ ರವಿ ಶಿರವಾರ ಮುನಿನಾರಾಯಣಪ್ಪ, ಮಹಾದೇವ್ ಮತ್ತಿತರರು ಭಾಗವಹಿಸಿದ್ದರು.

