ದೊಡ್ಡಬಳ್ಳಾಪುರ: ಇದೇ ಅಕ್ಟೋಬರ್ ತಿಂಗಳಿಗೆ ಸಂಬಂಧಿಸಿದ ಪಡಿತರ ಆಹಾರ ಧಾನ್ಯವನ್ನು ಬಿಡುಗಡೆ ಮಾಡಲಾಗಿದ್ದು, ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಧಾನ್ಯ ಪಡೆದುಕೊಳ್ಳಬೇಕು ಎಂದು ಆಹಾರ ಶಿರಸ್ತೆದಾರ್ ರಮೇಶ್ ಹರಿತಲೇಖನಿಗೆ ತಿಳಿಸಿದ್ದಾರೆ.
ಕೋವಿಡ್-19 ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅಕ್ಟೋಬರ್-2020 ತಿಂಗಳಿಗೆ ಬಿಡುಗಡೆಯಾದ ಪಡಿತರ ಧಾನ್ಯ ಬಿಡುಗಡೆಗೊಳಿಸಿದ್ದು, ಪಡಿತರ ಚೀಟಿವಾರು ವಿತರಿಸುವ ಪ್ರಮಾಣದ ವಿವರ ಇಂತಿದೆ.
ಅಂತ್ಯೋದಯ ಪಡಿತರ ಚೀಟಿ ಕಾರ್ಡ್‍ದಾರರಿಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರತಿ ಕಾರ್ಡಿಗೆ ಉಚಿತವಾಗಿ 35 ಕೆಜಿ ಅಕ್ಕಿ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಉಚಿತವಾಗಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಕಾರ್ಡ್‍ಗೆ 2 ಕೆ.ಜಿ ಕಡಲೆ ಕಾಳು ವಿತರಿಸಲಾಗುವುದು.
ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಕಾರ್ಡಿಗೆ 2 ಕೆ.ಜಿ ಗೋಧಿ ಉಚಿತವಾಗಿ ವಿತರಿಸಲಾಗುವುದು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಕಾರ್ಡ್‍ಗೆ 2 ಕೆ.ಜಿ ಕಡಲೆಕಾಳು ಉಚಿತವಾಗಿ ವಿತರಿಸಲಾಗುವುದು. ಎಪಿಎಲ್ ಪಡಿತರ ಚೀಟಿ ಹೊಂದಿರುವ, ಒಪ್ಪಿಗೆ ನೀಡಿದ ಪಡಿತರ ಚೀಟಿಗೆ ಪ್ರತಿ ಕೆ.ಜಿ ಗೆ ರೂ.15 ರಂತೆ ಏಕ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ 2 ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆ.ಜಿ ಅಕ್ಕಿ ವಿತರಿಸಲಾಗುವುದು.
ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಪಡಿತರ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕಡ್ಡಾಯವಾಗಿ ಬೆರಳಚ್ಚು ಮೂಲಕ ಹಾಗೂ ಬೆರಳಚ್ಚು ಬಾರದ ಕಾರ್ಡ್ ದಾರರು ಆಧಾರ್ ಓ.ಟಿ.ಪಿ ಮೂಲಕ ಪಡಿತರ ವಿತರಣೆ ಮಾಡಲಾಗಿದೆ. ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರದಲ್ಲಿ ನಿಂತು ಪಡಿತರ ಆಹಾರಧಾನ್ಯ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

