ದೊಡ್ಡಬಳ್ಳಾಪುರ: ಶಿಕ್ಷಕರ ಮೇಲೆ ಜೆಡಿಎಸ್ ಮುಖಂಡರು ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿರುವ ಬಿಜೆಪಿ ಕಾನೂನು ಪ್ರಕೋಷ್ಠದವರು ದಾಖಲೆ ಸಹಿತ ರುಜುವಾತು ಮಾಡಿದಲ್ಲಿ, ಸಾರ್ವಜನಿಕ ಜೀವನದಿಂದ ದೂರ ಸರಿಯುತ್ತೇವೆ. ಇಲ್ಲವೇ ಬಿಜೆಪಿ ಕಾನೂನು ಪ್ರಕೋಷ್ಠದವರು ಸಾರ್ವಜನಿಕ ಜೀವನದಿಂದ ದೂರ ಉಳಿಯಬೇಕೆಂದು ಜೆಡಿಎಸ್ ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ ಅಂಜನಗೌಡ ಸವಾಲು ಎಸೆದಿದ್ದಾರೆ.
ದೊಡ್ಡಬಳ್ಳಾಪುರ ನಗರದ ಒಕ್ಕಲಿಗರ ಸಮುದಾಯ ಭವನದ ಸಮೀಪವಿರುವ ಎ.ಪಿ.ರಂಗನಾಥ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೆಂಗಳೂರು ಪದವೀಧರ ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು 10 ಸಾವಿರ ನಕಲಿ ಮತದಾರರು ಚುನಾವಣೆ ಪಟ್ಟಿಯಿಂದ ಕೈಬಿಟ್ಟಿರುವ ಕಾರಣ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಹಾಗೂ ತಂಡ ಸೋಲಿನ ಹತಾಶೆಗೆ ಒಳಗಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇವರ ಹಿಂದೆ ಕೆಲ ಖಾಸಗಿ ಶಾಲೆಗಳ ಲಾಬಿ ಕಾರ್ಯ ನಿರ್ವಹಿಸುತ್ತಿವೆ ಎಂದು ದಾಖಲೆ ನೀಡಿದರು. ಬಿಜೆಪಿ ಕಾನೂನು ಪ್ರಕೋಷ್ಠದ ರವಿಮಾವಿನಕುಂಟೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸೋತಿರುವ ಹತಾಶೆಯಲ್ಲಿ ಹಾಗೂ ಪ್ರಚಾರ ಪಡೆಯಬೇಕೆಂಬ ಕಾರಣ ಈ ರೀತಿ ಮಾಹಿತಿ ಇಲ್ಲದೆ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದಾರೆ.
ಬೆಂಗಳೂರು ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಪಟ್ಟಿಯಲ್ಲಿ ತಾಲ್ಲೂಕಿನ ಪ್ರಸಿದ್ದ ಶಾಲೆಯ ಅಧ್ಯಕ್ಷರು, ಕಾರ್ಯದರ್ಶಿಗಳು ತಮ್ಮ ಮಡದಿಯರು, ಶಾಲೆಯ ಚಾಲಕರ ಹೆಸರಲ್ಲಿ 194 ಜನ ನಕಲಿ ಮತದಾರರನ್ನು ಸೃಷ್ಟಿಸಿದ್ದರು. ಇದನ್ನು ಜೆಡಿಎಸ್ ಪಕ್ಷದವರು ಪತ್ತೆ ಹಚ್ಚಿದ ಕಾರಣ ಇಲ್ಲ ಸಲ್ಲದ ಆರೋಪಕ್ಕೆ ಇಳಿದಿದ್ದಾರೆ. ಕಳೆದ 18 ವರ್ಷದಿಂದ ಪುಟ್ಟಣ್ಣ ಆಯ್ಕೆಯಾಗಿದ್ದರು ಶಿಕ್ಷಕರಿಗೆ ಯಾವುದೇ ನೆರವು ನೀಡಲಿಲ್ಲ ಈ ಬೇಸರ ಶಿಕ್ಷಕರಲ್ಲಿದೆ ಎಂದರು.
ನ್ಯಾಯವಾದಿ ಮುನಿಗಂಗಯ್ಯ ಮಾತನಾಡಿ, ಜೆಡಿಎಸ್ ಮುಖಂಡರು ಬೆದರಿಕೆ ಹಾಕಿದ್ದಾರೆಂದು ಯಾವುದೇ ದಾಖಲೆ ಇಲ್ಲದೆ ಬಿಜೆಪಿ ಕಾನೂನು ಪ್ರಕೋಷ್ಠದವರು ಪತ್ರಿಕಾಗೋಷ್ಠಿ ನಡೆಸಿರುವುದು ಖಂಡನೀಯ. ಕಾನೂನಿನ ಅರಿವು ಇರುವವರು ಈ ರೀತಿ ಗಾಳಿ ಸುದ್ದಿ ಇದೆ ಎಂದು ಪತ್ರಿಕಾಗೋಷ್ಠಿ ನಡೆಸಿರುವುದು ಕಾನೂನಿನ ಅರಿವಿಲ್ಲದವರು ಮಾಡುವ ಕೆಲಸ ಎಂದರು.
ನ್ಯಾಯವಾದಿ ಕೃಷ್ಣಮೂರ್ತಿ ಮಾತನಾಡಿ, ಶಿಕ್ಷಕರಿಗೆ ಬೆದರಿಕೆ ಹಾಕುವ ನೀಚ ಮಟ್ಟಕ್ಕೆ ಜೆಡಿಎಸ್ ಪಕ್ಷದ ಮುಖಂಡರು ಎಂದಿಗೂ ಇಳಿದಿಲ್ಲ. ದಾಖಲೆ ಇದ್ದರೆ ದೂರು ನೀಡಿ. ಅದು ಬಿಟ್ಟು ಸುಖಾಸುಮ್ಮನೆ ಆರೋಪಮಾಡಿ ಶಿಕ್ಷಕರಲ್ಲಿ ಗೊಂದಲ ಸೃಷ್ಟಿ ಮಾಡಬಾರದೆಂದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿಗಳಾದ ಕನಕರಾಜು, ಜಗನ್ನಾಥ್, ಹರೀಶ್, ಸತೀಶ್, ಕೃಷ್ಣಮೂರ್ತಿ, ಮುಖಂಡರಾದ ವಡ್ಡರಹಳ್ಳಿ ರವಿ, ಆರ್.ಕೆಂಪರಾಜ್, ಶಿವಕುಮಾರ್ ಮತ್ತಿತರಿದ್ದರು.

