ದೊಡ್ಡಬಳ್ಳಾಪುರ: ಇತ್ತೀಚೆಗೆ ನಿಧನರಾದ ಮಹಿಳಾ ಸಮಾಜದ ಸಂಸ್ಥಾಪಕ ಕಾರ್ಯದರ್ಶಿ ಕಮಲಮ್ಮ ಅವರಿಗೆ ಮಹಿಳಾ ಸಮಾಜದ ವತಿಯಿಂದ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್.ಪ್ರಭಾ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದ ಕಾಲದಲ್ಲಿ ಕಮಲಮ್ಮ ಅವರ ಮಹಿಳಾಪರ ಸಮಾಜ ಸೇವೆ ಅನನ್ಯವಾದದ್ದು. ಭೀಮಕ್ಕ ಅವರು ಮಹಿಳಾ ಸಮಾಜವನ್ನು 1936ರಲ್ಲಿ ಸ್ಥಾಪಿಸಿದಾಗ ಸ್ವಾತಂತ್ರ್ಯ ಹೋರಾಟಗಾರ ಗಾಂಧಿವಾದಿ ಎಸ್.ಆರ್.ಗುರುಲಿಂಗಯ್ಯ ಅವರ ಪತ್ನಿ ಅಂದಿನ ಕಾಲದಲ್ಲಿಯೇ ಉತ್ತಮ ಶಿಕ್ಷಣ ಪಡೆದಿದ್ದ ಕಮಲಮ್ಮ ಅವರನ್ನು ಮಹಿಳಾ ಸಮಾಜದ ಸಂಸ್ಥಾಪಕ ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದರು. ಅಲ್ಲಿಂದ ಆರಂಭವಾದ ಕಮಲಮ್ಮ ಅವರ ಸಮಾಜಸೇವೆ 8 ದಶಕಗಳ ಕಾಲ ನಡೆಯಿತು.
ಮಹಿಳಾ ಸಮಾಜದ ಮೂಲಕ ಮಹಿಳೆಯರಿಗೆ ವಿವಿಧ ತರಬೇತಿ ಹಾಗೂ ಮಾರ್ಗದರ್ಶನ, ಕುಟುಂಬ ಯೋಜನೆಯಲ್ಲಿ ಆಪ್ತ ಸಲಹೆ, ಮೈಸೂರು ಮಹಿಳಾ ಸಮ್ಮೇಳನ ಹಾಗೂ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗಿ, ಥಿಯಾಸಾಫಿಕಲ್ ಸೊಸೈಟಿಯಲ್ಲಿ ಕಾರ್ಯದರ್ಶಿಯಾಗಿ, ಮೊದಲಾದ ಹಲವಾರು ಸೇವಾ ಕಾರ್ಯಗಳನ್ನು ಮಾಡಿದ್ದ ಅವರು, ತಾಲೂಕಿನಲ್ಲಿ ಗೈಡ್ಸ್ ಘಟಕವನ್ನು ಸಹ ಸ್ಥಾಪಿಸಿದ್ದರು. 101 ವರ್ಷಗಳ ಜೀವನವನ್ನು ಸಾರ್ಥಕ ರೀತಿಯಲ್ಲಿ ನಡೆಸಿದ ಕಮಲಮ್ಮ ಅವರು ಇಂದಿನ ಮಹಿಳೆಯರಿಗೆ ಮಾದರಿ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಉಪಾಧ್ಯಕ್ಷೆ ಕೆ.ಜೆ.ಕವಿತ, ಸಹ ಕಾರ್ಯದರ್ಶಿ ಟಿ.ಪಿ.ವರಲಕ್ಷ್ಮೀ, ಖಜಾಂಚಿ ಜಿ.ವಿ.ಯಶೋದ, ನಿರ್ದೇಶಕರಾದ ಎಂ.ಕೆ.ವತ್ಸಲ, ವಿ.ನಿರ್ಮಲ, ಎಸ್.ಗೌರಮ್ಮ, ಬಿ.ಎ.ಗಿರಿಜ ಹಾಗೂ ಮಹಿಳಾ ಸಮಾಜದ ಸಿಬ್ಬಂದಿ ಭಾಗವಹಿಸಿದ್ದರು.

