ದೊಡ್ಡಬಳ್ಳಾಪುರ: ನಮ್ಮ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಿದ್ದು, ಕೃಷಿಯಲ್ಲಿ ನೂತನ ಆವಿಷ್ಕಾರಗಳು ನಿರಂತರವಾಗಿ ನಡೆಯುತ್ತಿದೆ. ಇದರ ಜೊತೆಗೆ ಪೌಷ್ಠಿಕ ಭದ್ರತೆಯನ್ನು ಸಾಧಿಸುವುದು ನಮ್ಮೆಲ್ಲರ ಗುರಿಯಾಗಿದ್ದು, ಇದಕ್ಕೆ ಪೂರಕವಾಗಿ ರೈತರಿಗೆ ಹಾಗೂ ಕೃಷಿ ಪರಿಕರಗಳ ವಿತರಕರಿಗೆ ಕೃಷಿ ತಂತ್ರಜ್ಞಾನಗಳ ಅರಿವು ಹಾಗೂ ಮಾರ್ಗದರ್ಶನದ ಅಗತ್ಯವಿದೆ ಎಂದು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್. ರಾಜೇಂದ್ರಪ್ರಸಾದ್ ತಿಳಿಸಿದರು.
ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ವಿಸ್ತರಣೆ ನಿರ್ವಹಣೆ ರಾಷ್ಟ್ರೀಯ ಸಂಸ್ಥೆ, ಮ್ಯಾನೇಜ್, ಹೈದರಾಬಾದ್ ಸಹಯೋಗದಲ್ಲಿ ಕೃಷಿ ಪರಿಕರಗಳ ವಿತರಕರಿಗೆ ಒಂದು ವರ್ಷದ ಡಿಪ್ಲೊಮಾ ಕೋರ್ಸ್ಗೆ ನೋಂದಾಯಿಸಿದ ಅಭ್ಯರ್ಥಿಗಳಿಗೆ ಸಂಪರ್ಕ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಆಹಾರ ಉತ್ಪಾದನೆಯಲ್ಲಿ ಪ್ರಗತಿಯನ್ನು ಸಾಧಿಸಿದೆ. ಕೃಷಿಯಲ್ಲಿ ರೈತರಷ್ಟೇ ಮಹತ್ವವು ಕೃಷಿ ಪರಿಕರ ಮಾರಾಟಗಾರರಿಗಿದ್ದು, ರೈತರೊಂದಿಗೆ ನೇರವಾಗಿ ಸಂಪರ್ಕದಲ್ಲಿರುವುದರಿಂದ, ಈ ಡಿಪ್ಲೋಮಾ ತರಗತಿಗಳಲ್ಲಿ ಕೃಷಿ ತಂತ್ರಜ್ಞಾನಗಳ ಬಗ್ಗೆ ಕೊಡುವಂತಹ ಮಾಹಿತಿಗಳನ್ನು ಮನದಟ್ಟುಮಾಡಿಕೊಂಡು ರೈತರಿಗೆ ಸೂಕ್ತ ರೀತಿಯಲ್ಲಿ ಕೃಷಿ ಬಗ್ಗೆ ಮಾರ್ಗದರ್ಶನ ನೀಡಬೇಕು. ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸುವುದರೊಂದಿಗೆ ರೈತರ ಆದಾಯ ದ್ವಿಗುಣಗೊಳಿಸುವುದು ಕೃಷಿ ಪರಿಕರ ಮಾರಾಟಗಾರರ ಧ್ಯೇಯವಾಗಬೇಕು ಎಂದರು.
ಪ್ರಸ್ತುತ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನಗಳನ್ನು ಪಾಲಿಸುತ್ತಿರಬೇಕೆಂದು ಕರೆ ನೀಡಿದರು.
ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ಬೈರೇಗೌಡ ಮಾತನಾಡಿ ಡಿಪ್ಲೋಮಾ ತರಗತಿಗಳ ಸದುಪಯೋಗ ಪಡೆಯಬೇಕು. ವ್ಯಾವಹಾರಿಕ ದೃಷ್ಟಿಯಿಂದ ಮಾತ್ರವಲ್ಲದೇ ರೈತರಿಗೆ ಕೃಷಿ ತಾಂತ್ರಿಕತೆಗಳ ಮಾಹಿತಿಯನ್ನು ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಪಿ. ಮಲ್ಲಿಕಾರ್ಜುನ ಗೌಡ, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ್, ಕೃ.ವಿ.ವಿಯ ತಾಂತ್ರಿಕ ಅಧಿಕಾರಿ ಡಾ. ಪಂಕಜ, ಕಾರ್ಯಕ್ರಮದ ಅನುವುಗಾರ ಓಬಳೇಶಪ್ಪ, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಹಾಗೂ ಕೃಷಿ ಪರಿಕರಗಳ ಮಾರಾಟಗಾರರು ಹಾಜರಿದ್ದರು.

