ದೊಡ್ಡಬಳ್ಳಾಪುರ: ಅಧಿಕಾರ ಅನುಭವಿಸಿದ್ದ ಪಕ್ಷಕ್ಕೆ ನಂಬಿಕೆ ದ್ರೋಹ ಬಗೆದು ಹಣದ ಆಸೆಗೆ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಪತನವಾಗಲು ಪ್ರಮುಖ ಕಾರಣ ಕರ್ತರು ಪುಟ್ಟಣ್ಣ. ಇಂತಹವರಿಂದ ಶಿಕ್ಷಕರಿಗೆ ಎಂದೂ ಅನುಕೂಲವಾಗುವುದಿಲ್ಲ ಎಂದು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಮಂಜುನಾಥ್ ದೂರಿದರು.
ಅವರು ಶುಕ್ರವಾರ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಜೆಡಿಎಸ್ ಪಕ್ಷದ ವರಿಷ್ಟರಾದ ಎಚ್.ಡಿ.ದೇವೇಗೌಡರು ಶಿಕ್ಷಕರ ಪರವಾಗಿ ಮಾಡಿರುವ ಕೆಲಸವನ್ನು ಮೆಚ್ಚಿ ಶಿಕ್ಷಕ ಸಮುದಾಯ ಪುಟ್ಟಣ ಅವರಿಗೆ ಮತ ನೀಡಿ ಮೂರು ಬಾರಿ ಆಯ್ಕೆಯಾಗಲು ಸಾಧ್ಯವಾಯಿತು. ಆದರೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಂತರ ಪುಟ್ಟಣ್ಣ ಅವರು ಎಂದೂ ಶಿಕ್ಷಕರ ಪರವಾಗಿ ಕೆಲಸ ಮಾಡದೆ ಶಿಕ್ಷಣ ಸಂಸ್ಥೆಗಳ ಮಾಲೀಕರ ಪರವಾಗಿ ಕೆಲಸ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಶಿಕ್ಷಣ ಇಲಾಖೆಯ ಜಿಲ್ಲಾ ಹಂತದಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಶಿಕ್ಷಕರ ಮೇಲೆ ಒತ್ತಡ ಹಾಕುವ ಮೂಲಕ ಮತ ಪಡೆಯಲು ಮುಂದಾಗಿದೆ ಎಂದು ಆರೋಪಿಸಿದರು.
ಬೆಂಗಳೂರು ಪದವೀಧರ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಮಾತನಾಡಿ, ರಾಜ್ಯದಲ್ಲಿ ಎಂದೂ ಪುಟ್ಟಣ್ಣ ಅವರು ಶಿಕ್ಷಕರ ಪರವಾಗಿ ಕೆಲಸ ಮಾಡಿರುವ ಉದಾಹರಣೆಯೇ ಇಲ್ಲ. ಕೆಲವೇ ಜನ ಶಿಕ್ಷಕರ ಗುಂಪನ್ನು ಕಟ್ಟಿಕೊಂಡು ಅವರ ಏಳಿಗೆಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ನಕಲಿ ಮತದಾರರ ಮೂಲಕ ಗೆಲ್ಲಬಹುದು ಎನ್ನುವ ಭ್ರಮೆಯಲ್ಲಿದ್ದರು. ಈ ಬಾರಿ ಅಸಲಿ ಮತದಾರರು ಮಾತ್ರ ಪಟ್ಟಿಯಲ್ಲಿದ್ದಾರೆ ಎಂದರು.
ದೊಡ್ಡಬಳ್ಳಾಪುರದ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳವರು ತಮ್ಮ ಇಡೀ ಕುಟುಂಬದ ಸದಸ್ಯರೆಲ್ಲರನ್ನು ಪದವೀಧರ ಶಿಕ್ಷಕರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದರು. ಇಂತಹವುಗಳಿಗೆ ಕಡಿವಾಣ ಹಾಕಿದ್ದನ್ನು ಸಹದೇ ನಮ್ಮ ಪಕ್ಷದ ಮುಖಂಡರನ್ನು ದೂರುತ್ತಿದ್ದಾರೆ. ಪಾಠ ಮಾಡುತ್ತಿದ್ದ ಶಿಕ್ಷಕರು ಲಾಕ್‌ಡೌನ್ ಆರಂಭವಾದ ನಂತರ ರಸ್ತೆ ಬದಿಯಲ್ಲಿ ತರಕಾರಿ,ಬೋಂಡಾ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರಿಗೆ ಸಂಕಷ್ಟದ ಸಮಯದಲ್ಲಿ ಸಂಬಳ ನೀಡದೆ ಬೀದಿಗೆ ದಬ್ಬಿದವರು ಇಂದು ಯಾವ ನೈತಿಕತೆ ಮೇಲೆ ಶಿಕ್ಷಕರನ್ನು ಮತಹಾಕುವಂತೆ ಕೇಳಲು ಹೋಗುತ್ತಾರೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಖ್ಯಾತ ವೈದ್ಯರಾದ ಡಾ.ಅಂಜನಪ್ಪ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಜೆಡಿಎಸ್ ಮುಖಂಡ ಎಂ.ಸಿ.ವೇಣುಗೋಪಾಲ್ ಇದ್ದರು.

