ದೊಡ್ಡಬಳ್ಳಾಪುರ: ಬೆಂಗಳೂರಿನಲ್ಲಿ ಪ್ರತಿ ದಿನ ಉತ್ಪಾದನೆಯಾಗುವ ಹೆಚ್ಚುವರಿ ಕಸವನ್ನು ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್ಜಿಪಿ ಬಿಬಿಎಂಪಿ ಕಸ ವಿಲೇವಾರಿ ಘಟದಲ್ಲಿ ತಂದು ಸುರಿಯಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳ ನಿರ್ಧಾರಕ್ಕೆ ತಾಲೂಕಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಎಂಎಸ್ಜಿಪಿ ಬಿಬಿಎಂಪಿ ಕಸ ವಿಲೇವಾರಿ ಘಟಕದಿಂದ ಸ್ಥಳೀಯರಿಗೆ ಆಗುತ್ತಿರುವ ತೊಂದರೆ ವಿರುದ್ದ ಜನವರಿಯಲ್ಲಿ ಒಂದು ವಾರಗಳ ಕಾಲ ಪಕ್ಷಾತೀತವಾಗಿ ನಡೆದ ಹೋರಾಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸ್ಥಳೀಯ ಶಾಸಕರು ಹಾಗೂ ಹೋರಾಟಗಾರರೊಂದಿಗೆ ಸಭೆ ನಡೆಸಿ ಹೆಚ್ಚುವರಿಯಾಗಿ ಬರುತ್ತಿರುವ ಕಸವನ್ನು ಕಡಿಮೆ ಮಾಡುವುದು, ಕಸವಿಲೇವಾರಿ ಘಟಕದಿಂದ ಕೊಚ್ಚೆ ನೀರು ಹೊರ ಹೋಗದಂತೆ ಕಾಂಕ್ರಿಟ್ ತಡೆಗೋಡೆ ನಿರ್ಮಿಸುವುದು ಸೇರಿದಂತೆ ವಿವಿಧ ಮನವಿಗಳನ್ನು ಈಡೇರಿಸುವ ಭರವಸೆ ನೀಡಿದ್ದರು.
ಆದರೆ ಈ ಯಾವುದೇ ಭರವಸೆಗಳು ಈಡೇರಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿರುವ ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ತಾಪಂ ಸದಸ್ಯರಾದ ಡಿ.ಸಿ.ಶಶಿಧರ್, ಕಣಿವೇಪುರ ಸುನೀಲ್ ಕುಮಾರ್, ಈಗ ಮತ್ತಷ್ಟು ಕಸವನ್ನು ಬೆಂಗಳೂರಿನಿಂದ ತಂದು ಇಲ್ಲಿಗೆ ಸುರಿಯುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿರುವ ಕುರಿತು ವರದಿಯಾಗಿದೆ. ನಮ್ಮ ತಾಲ್ಲೂಕನ್ನು ಬಿಬಿಎಂಪಿ ಕಸದ ತೊಟ್ಟಿಯನ್ನಾಗಿ ಮಾಡಲು ಪಣತೊಟ್ಟಂತೆ ವರ್ತಿಸುತ್ತಿದೆ. ಈಗ ಇಲ್ಲಿಗೆ ಬರುತ್ತಿರುವ ಕಸವನ್ನೇ ಸರಿಯಾಗು ನಿರ್ವಹಣೆ ಮಾಡದೇ ಕಸ ವಿಲೇವಾರಿ ಘಟಕದ ಸುತ್ತಲಿನ ಗ್ರಾಮಗಳ ಜನರು ಸೊಳ್ಳೆ, ನೊಣಗಳ ಹಾವಳಿಯಿಂದ ನರಕಯಾತನೆ ಅನುಭವಿಸುವಂತಾಗಿದೆ. ಈಗ ಮತ್ತಷ್ಟು ಕಸ ತಂದು ಸುರಿಯುವ ನಿರ್ಧಾರ ಖಂಡನೀಯ. ಈ ಬಗ್ಗೆ ಸದ್ಯದಲ್ಲೇ ಸಭೆ ನಡೆಸಿ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

