ದೊಡ್ಡಬಳ್ಳಾಪುರ: ಕರೊನಾ ಸೋಂಕಿನ ಪ್ರಕರಣಗಳು ದಿನೆ ದಿನೆ ಕಡಿಮೆ ಸಂಖ್ಯೆಗೆ ಇಳಿಯಲು ಕಾರಣ ಫಲಿತಾಂಶ ಬಾಕಿ ಉಳಿದಿರುವುದಾಗಿದೆ ಎಂಬ ಆತಂಕಕಾರಿ ವಿಷಯ ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡುತ್ತಿರುವ ಕೋವಿಡ್-19 ಬುಲೆಟಿನ್ ಅಲ್ಲಿ ಬಯಲಾಗಿದೆ.
ಅಕ್ಟೋಬರ್ 15 ರಿಂದ ಕರೊನಾ ತಪಾಸಣೆ ಫಲಿತಾಂಶ ಸಾವಿರ ಲೆಕ್ಕಾದಲ್ಲಿ ಬಾಕಿ ಉಳಿಯುತ್ತಿದ್ದು, ಈಗಾಗಲೇ ಕರೊನಾ ಸಮೂಹಕ್ಕೆ ಹರಡಿರುವ ಆತಂಕದ ನಡುವೆ ಫಲಿತಾಂಶ ವಿಳಂಬದಿಂದಾಗಿ ಮತ್ತಷ್ಟು ಜನರಿಗೆ ಹಬ್ಬುವ ಸಾಧ್ಯತೆ ಹೆಚ್ಚಾಗಿದೆ.
ಜಿಲ್ಲೆಯಲ್ಲಿನ ನಡೆಸಲಾಗುವ ಕೋವಿಡ್-19 ಪರೀಕ್ಷೆಯ ಫಲಿತಾಂಶಕ್ಕಾಗಿ, ಸಿದ್ದಾರ್ಥ ಮೆಡಿಕಲ್ ಕಾಲೇಜು, ಆಕಾಶ್ ಆಸ್ಪತ್ರೆ, ಎಂವಿಜೆ ಆಸ್ಪತ್ರೆ, ದೇವನಹಳ್ಳಿ ಸರ್ಕಾರಿ ಪ್ರಯೋಗಾಲಯಗಳಿಗೆ ಕಳಿಸಲಾಗುತ್ತಿದೆ.ಅಲ್ಲದಡ ಹೆಚ್ಚುವರಿಯಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಗೂ ಸಹ ಕಳಿಸಲಾಗುತ್ತಿದೆ.
ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಕೋವಿಡ್-19 ಬುಲೆಟಿನ್ ವರದಿಯಂತೆ ಅ.15 – 3964, ಅ.16 – 3894, ಅ.17 – 5594, ಅ.18 – 5794, ಅ.19 – 7294, ಅ.20 – 7058, ಅ.21 – 6892, ಅ.22 – 7592 ಆಗಿದ್ದು ಅ.23ಕ್ಕೆ ಒಟ್ಟು 7892 ಫಲಿತಾಂಶ ಬಾಕಿ ಉಳಿದಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ 15404 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಹಬ್ಬದ ಸರಣಿ ಆರಂಭವಾಗಿರುವ ಬೆನ್ನಲ್ಲೆ ಕೋವಿಡ್-19 ಫಲಿತಾಂಶ ವಿಳಂಬದ ಕಾರಣ ಸೋಂಕಿತನಿಗೆ ಫಲಿತಾಂಶ ತಿಳಿಯದೆ ಮುಂಜಾಗ್ರತೆ ಕ್ರಮಕೈಗೊಳ್ಳದ ಕಾರಣ ಮತ್ತಷ್ಟು ಜನರಿಗೆ ಕರೊನಾ ಹರಡುವ ಸಾಧ್ಯತೆ ಹೆಚ್ಚಿರುವ ಆತಂಕ ಹೆಚ್ಚಾಗಿದೆ.
ಆತಂಕ ಬೇಡಾ ಮುಂಜಾಗ್ರತೆವಹಿಸಿ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಕರೊನಾ ಸೋಂಕಿನ ಹಾವಳಿ ಮುಗಿಯದ ಕಾರಣ ಹಬ್ಬದ ಸಂಧರ್ಭದಲ್ಲಿ ಜನತೆ ಮೈಮರೆಯದೆ ಎಚ್ಚರಿಕೆವಹಿಸಬೇಕಿದೆ.ಪ್ರತಿ ನಿತ್ಯ ಶೇ.100 ರಷ್ಟು ಟೆಸ್ಟ್ ಮಾಡಲಾಗುತ್ತಿದ್ದು, ಲ್ಯಾಬ್ ಗಳ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಟೆಸ್ಟ್ ನಡೆಸುತ್ತಿರುವುದರಿಂದಾಗಿ ಬಾಕಿ ಉಳಿಯುತ್ತಿದ್ದು, ಇತರ ಲ್ಯಾಬ್ ಗಳಿಗೆ ಕಳಿಸಿ ತ್ವರಿತವಾಗಿ ಫಲಿತಾಂಶ ಪಡೆಯಲು ಕ್ರಮಕೈಗೊಳ್ಳಲಾಗಿದೆ.

