ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಎಂಸಿಎಸ್) ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನ.21 ರಂದು ಚುನಾವಣೆ ನಡೆಯಲಿದೆ ಎಂದು ತಹಶೀಲ್ದಾರ್ ಹಾಗೂ ಚುನಾವಣ ಅಧಿಕಾರಿ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.
ನ.21 ರಂದು ಬೆಳಿಗ್ಗೆ 9 ಗಂಟೆಗೆ ನಾಮ ಪತ್ರ ಸಲ್ಲಿಕೆ ಆರಂಭವಾಗಲಿದೆ. ಬೆಳಿಗ್ಗೆ 11 ಗಂಟೆವರೆಗೆ ನಾಮ ಪತ್ರಗಳನ್ನು ವಾಪಸುಪಡೆಯಲು ಅವಕಾಶ ನೀಡಲಾಗಿದೆ.
13 ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್ನಲ್ಲಿ 6 ಜನ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು, 5 ಜನ ಜೆಡಿಎಸ್, 1 ಬಿಜೆಪಿ ಹಾಗೂ 1 ಜೆಡಿಎಸ್ ಭಿನ್ನ ಮತೀಯ ಬಣದ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಬಿಜೆಪಿ ಮುಖಂಡ ಕನ್ನಮಂಗಲ ಸಿದ್ದರಾಮಣ್ಣ ಅವರನ್ನು ಸರ್ಕಾರ ಗುರುವಾರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮತಚಲಾಯಿಸುವ ಹಕ್ಕನ್ನು ನಾಮ ನಿರ್ದೇಶಕ ಸದಸ್ಯ ಹಾಗೂ ಸರ್ಕಾರಿ ಅಧಿಕಾರಿ ಸೇರಿದಂತೆ 15 ಜನ ಹಕ್ಕು ಹೊಂದಿದ್ದಾರೆ.
ಹೊಂದಾಣಿಕೆ: ಟಿಎಪಿಎಂಸಿಎಸ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವ ಮಾತುಕತೆಗಳು ಅಂತಿಮ ಹಂತಕ್ಕೆ ಬಂದಿವೆ. ಆದರೆ ಮೊದಲ ಅವಧಿಯ ಅಧ್ಯಕ್ಷ ಸ್ಥಾನ ಯಾವ ಪಕ್ಷಕ್ಕೆ ಎನ್ನುವುದಷ್ಟೇ ನಿರ್ಧಾರವಾಗಬೇಕಿದೆ ಎಂದು ಜೆಡಿಎಸ್ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಡಿ.ಸಿದ್ದರಾಮಣ್ಣ, ಎನ್.ರಂಗಪ್ಪ, ಎಂ.ವೆಂಕಟೇಶ್, ಎಂ.ಗೋವಿಂದರಾಜ್, ಎಸ್.ದಯಾನಂದ್, ಜೆಡಿಎಸ್ ನಿಂದ ವಿ.ಆಂಜನೇಗೌಡ ಆಕಾಂಕ್ಷಿಗಳಾಗಿದ್ದಾರೆ. ಎಂ.ಗೋವಿಂದರಾಜ್, ಎಸ್.ದಯಾನಂದ್ ಅವರು ಈ ಹಿಂದೆ ಅಧ್ಯಕ್ಷರಾಗಿದ್ದರಿಂದ ಅವರಿಗೆ ಮತ್ತೆ ಅಧ್ಯಕ್ಷ ಸ್ಥಾನ ಏಕೆ ಎನ್ನುವ ವಾದ ಮುನ್ನೆಲೆಗೆ ಬಂದಿದೆ.
ವಿ.ಆಂಜನೇಗೌಡ ಅವರಿಗೆ ಕಳೆದ ಬಾರಿ ಅಧ್ಯಕ್ಷ ಸ್ಥಾನ ಕೈತಪ್ಪಿದೆ, ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ವಿ.ಆಂಜನೇಗೌಡ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವುದು ಜೆಡಿಎಸ್ ಮುಖಂಡರ ವಾದ. ಅಲ್ಲದೆ ಈಗಾಗಲೇ ಜೆಡಿಎಸ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ.
ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ಖಾತೆಯಲ್ಲಿ ಫಾಲೋ ಮಾಡಿ

