ಬೆಂಗಳೂರು: ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ನವೀನ್ ರಾಜ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಅಧ್ಯಕ್ಷರ ಸ್ಥಾನದ ಚುನಾವಣೆ ಸಭೆಯಲ್ಲಿ ವಿ.ಪ್ರಸಾದ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೇವನಹಳ್ಳಿ ತಾಲ್ಲೂಕು, ಬೀರಸಂದ್ರ ಗ್ರಾಮ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 09 ಗಂಟೆಯಿಂದ 10 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ಅವರಿಗೆ ಜಿಲ್ಲಾ ಪಂಚಾಯತಿ ಸದಸ್ಯರಾದ ವಿ.ಪ್ರಸಾದ್ ಅವರು ಒಬ್ಬರು ನಾಮಪತ್ರ ಸಲ್ಲಿಸಿದ್ದರು. ನಂತರ ನಾಮಪತ್ರ ಪರಿಶೀಲನೆ ಕಾರ್ಯ ಹಾಗೂ ನಾಮಪತ್ರ ಕ್ರಮಬದ್ಧವಾಗಿದ್ದರಿಂದ ಅಂಗೀಕಾರವಾಯಿತು.
ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ನವೀನ್ ರಾಜ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತಿ ಅಧ್ಯಕ್ಷರ ಚುನಾವಣಾ ಸಭೆಯಲ್ಲಿ ಹಾಜರಾಗಿದ್ದ 17 ಮಂದಿ ಜಿಲ್ಲಾ ಪಂಚಾಯತಿ ಸದಸ್ಯರೆಲ್ಲರೂ ವಿ.ಪ್ರಸಾದ್ ಪರವಾಗಿ ಸಹಿ ಹಾಕುವ ಮೂಲಕ ನೂತನ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಅಧ್ಯಕ್ಷ ಸ್ಥಾನಕ್ಕೆ ಜಯಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಎರಡನೇ ಬಾರಿಗೆ ಆಯ್ಕೆಯಾದ ಪ್ರಸಾದ್ ರನ್ನು ಶಾಸಕರಾದ ಟಿ.ವೆಂಕಟರಮಣಯ್ಯ, ಶರತ್ ಬಚ್ಚೆಗೌಡ, ಮಾಜಿ ಸಚಿವ ಕೃಷ್ಣಾಭೈರೇಗೌಡ, ಪ್ರಭಾರ ಅಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಮತ್ತಿತರರು ಅಭಿನಂದನೆ ಸಲ್ಲಿಸಿದರು.
ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ಖಾತೆಯಲ್ಲಿ ಫಾಲೋ ಮಾಡಿ

