ಬೆಂಗಳೂರು: ರಾಜ್ಯ ಸರ್ಕಾರದ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರ ವಿರೋಧಿಸಿ ಕರ್ನಾಟಕ ಬಂದ್ ನಡೆಸಲು ಕನ್ನಡ ಪರ ಸಂಘಟನೆಗಳು ಒಕ್ಕೊರಲ ತೀರ್ಮಾನಕ್ಕೆ ಬಂದಿವೆ.
ಈ ಹಿಂದೆಯೇ ಇದರ ವಿರುದ್ಧ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಪರ ಸಂಘಟನೆಗಳು ಹೇಳಿಕೊಂಡಿದ್ದವು. ಈ ವಿಚಾರವಾಗಿ ಇಂದು ಸಭೆ ನಡೆಸಿದ್ದು, ಈ ಸಭೆಯಲ್ಲಿ ಕರ್ನಾಟಕ ಬಂದ್‍ಗೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿವೆ.
ಡಿಸೆಂಬರ್ 5ರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಇರಲಿದ್ದು, ಆ ದಿನ ಯಾವ ವಾಹನ ಸಂಚಾರವಿರುವುದಿಲ್ಲ. ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ಇರಲಿದೆ.ಕರ್ನಾಟಕ ಬಂದ್ ಗೆ ಮುನ್ನ ಕನ್ನಡ ಪರ ಸಂಘಟನೆಗಳು ಗಡಿ ರಸ್ತೆ ಬಂದ್ ಮಾಡುವ ಯೋಜನೆ ಹೊಂದಿದ್ದು, ಈ ಯೋಜನೆಯಂತೆ ನವೆಂಬರ್ 23 ರಂದು ಬಳ್ಳಾರಿ ಗಡಿ ರಸ್ತೆ ಬಂದ್ ಆಗಲಿದೆ. ನವೆಂಬರ್ 24 ರಂದು ಅತ್ತಿಬೆಲೆ ಗಡಿ ಬಂದ್ ಆಗಲಿದೆ. ಮತ್ತು ನವೆಂಬರ್ 30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಬಂದ್ ಆಚರಿಸುವ ಯೋಜನೆ ಇದೆ.
ಈ ನಿರ್ಧಾರದಲ್ಲಿ ಯಾವ ಬದಲಾವಣೆ ಇಲ್ಲ. ಬಂದ್ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಹೇಳಬಾರದು ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಫಿಲ್ಮ್ ಚೇಂಬರ್ ನ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು, ಕರವೇ ಅಧ್ಯಕ್ಷ ಶಿವರಾಮೇಗೌಡ, ಮಂಜುನಾಥ್ ದೇವ, ಗಿರೀಶ್ ಗೌಡ, ಪಾಲನೇತ್ರ, ಟಿ.ಪಿ ಪ್ರಸನ್ನಕುಮಾರ್, ಅಮ್ಮಿಚಂದ್ರು, ನಾರಾಯಣ ಸ್ವಾಮಿ, ವಾಟಾಳ್ ವೆಂಕಟೇಶ್, ನರಸಿಂಹ ಮೂರ್ತಿ, ಮುಭಾರಕ್ ಪಾಷಾ, ಸಾಧಿಕ್ ಪಾಷಾ, ಬಾಲಾಜಿ ತಿಮ್ಲಾಪುರ, ಕೊಪ್ಪಳ ವಿಜಯ್, ಸಯ್ಯದ್ ಜಿಲಾನಿ ಪಾಷಾ, ಎರ್ರಿಸ್ವಾಮಿ, ಮುನ್ನಾವರ, ಪಾರ್ಥಸಾರಥಿ, ಬಾಲಾಜಿ ಕೃಷ್ಣಮೂರ್ತಿ, ವೇಣುಗೋಪಾಲ್, ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ಖಾತೆಯಲ್ಲಿ ಫಾಲೋ ಮಾಡಿ

