ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲುಕುಂಟೆ ಬಳಿ ಹೊಸ ಕೈಗಾರಿಕಾ ಪ್ರದೇಶ ತಲೆ ಎತ್ತುವ ಮೂಲಕ ಬಾಶೆಟ್ಟಿಹಳ್ಳಿ ನಂತರ ಮತ್ತೊಂದು ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಸಿದ್ದತೆಗಳು ಆರಂಭವಾಗಿವೆ. ಈ ಕುರಿತಂತೆ ಅಕ್ಟೋಬರ್ 10 ರಂದು ನಡೆದ ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿರುವ ಗ್ರಾಮದ ಸರ್ವೇ ನಂಬರ್ ಹಾಗೂ ನೀಲ ನಕ್ಷೆ ಪ್ರಕಟವಾಗಿದೆ.
ನೆಲಮಂಗಲ ತಾಲ್ಲೂಕಿನ ಓಬಳಾಪುರ ಹಾಗೂ ಹುಲಿಕುಂಟೆ ವ್ಯಾಪ್ತಿಯ 1,150 ಎಕರೆ ಪ್ರದೇಶದಲ್ಲಿ ‘ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್’ (ಎಂಎಂಎಲ್ಪಿ) ಸ್ಥಾಪನೆಯಾಗುತ್ತಿದೆ. ನೆಲಮಂಗಲ ತಾಲ್ಲೂಕಿನ ಓಬಳಾಪುರ ಕೈಗಾರಿಕಾ ಪ್ರದೇಶದಲ್ಲಿ 550 ಎಕರೆ. ಹುಲಿಕುಂಟೆ ಕೈಗಾರಿಕಾ ಪ್ರದೇಶದಲ್ಲಿ 600 ಎಕರೆಯನ್ನು ಗುರುತಿಸಲಾಗಿದೆ.
ಕೈಗಾರಿಕೆಗೆ ಸ್ವಾಧೀನವಾಗುತ್ತಿರುವ ಒಂದು ಎಕರೆ ಖುಷ್ಕಿಗೆ ಜಮೀನಿಗೆ ಕನಿಷ್ಠ ₹17 ರಿಂದ ₹55 ಲಕ್ಷ, ತರಿ ಜಮೀನಿಗೆ ₹19 ರಿಂದ ₹59 ಲಕ್ಷ, ಬಾಗಾಯ್ತು ಜಮೀನಿಗೆ ₹20 ರಿಂದ ₹65 ಲಕ್ಷ, ಸ್ಥಳೀಯ ಸಂಸ್ಥೆ ವಸತಿ ನಿವೇಶನ ಮೌಲ್ಯ ಪ್ರತಿ ಚದರಿ ಮೀಟರ್ಗೆ ₹1,200 ರಿಂದ ₹2,400. ಪ್ರಸ್ತಾಮಿತ ಬೆಲೆ ₹1,320 ರಿಂದ ₹2,880, ಸಕ್ಷಮ ಪ್ರಾಧಿಕಾರದಿಂದ ವಸತಿ ನಿವೇಶನದ ಮೌಲ್ಯ ಪ್ರತಿ ಚರದ ಮೀಟರ್ಗೆ ಪ್ರಸ್ತಾಪಿತ ಬೆಲೆ ₹2,640 ರಿಂದ ₹5,760 ಎಂದು ನಿಗದಿಪಡಿಸಲಾಗಿದೆ.
ಈ ಕೈಗಾರಿಕೆ ಅಗತ್ಯವಿತ್ತ ? ತಾಲ್ಲೂಕಿನ ಬಾಶೆಟ್ಟಿಹಳ್ಳಿಯಲ್ಲಿ 80ರ ದಶಕದಲ್ಲಿ ಆರಂಭವಾದ ಕೈಗಾರಿಕಾ ಪ್ರದೇಶ ನಾಲ್ಕು ಬಾರಿ ವಿಸ್ತರಣೆಯಾಗಿ ಈಗ ಸುಮಾರು 2,500 ಎಕರೆಗೆ ಬಂದು ನಿಂತಿದೆ. ಹಾಗೆಯೇ ಹುಲಿಕುಂಟೆ ಗಡಿ ಭಾಗಕ್ಕೆ ಹೊಂದಿಕೊಂಡಂತೆಯೇ ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆ, ಶಿವಗಂಗೆ ಸಮೀಪವು ಸುಮಾರು 1,500 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಯಾಗಿದೆ. ಈ ಇಷ್ಟೂ ಪ್ರದೇಶದಲ್ಲೂ ಭೂ ಸ್ವಾಧೀನವಾಗಿ ದಶಕಗಳು ಕಳೆದಿದ್ದರು ಇನ್ನು ಪೂರ್ಣಪ್ರಮಾಣದಲ್ಲಿ ಕೈಗಾರಿಕೆಗಳು ಕಾರ್ಯಾರಂಭ ಮಾಡದೇ ಜಮೀನು ಖಾಲಿಯಾಗಿಯೇ ಉಳಿದಿವೆ. ವಾಸ್ತವ ಸ್ಥಿತಿ ಹೀಗಿರುವಾಗ ತಾಲ್ಲೂಕಿಗೆ ಮತ್ತೊಂದು ಕೈಗಾರಿಕಾ ಪ್ರದೇಶ ಸ್ಥಾಪನೆ ಅಗತ್ಯ ಇತ್ತ ಎನ್ನುವ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹುಲಿಕುಂಟೆ, ಓಬಳಾಪುರ ವ್ಯಾಪ್ತಿಯಲ್ಲಿ ಬಹುತೇಕ ಜನ ಕೃಷಿಯನ್ನೇ ನಂಬಿ ಬದುಕು ನಡೆಸುತ್ತಿರುವ ಸಣ್ಣ ಹಿಡುವಳಿದಾರ ಕುಟುಂಬಗಳ ಹಾಗೂ ಸಂಖ್ಯೆಯೇ ಹೆಚ್ಚಾಗಿದೆ. ಇಂತಹ ಪ್ರದೇಶದಲ್ಲಿ ಕೃಷಿಕರನ್ನು ಒಕ್ಕಲೆಬ್ಬಿಸಿ ಕೈಗಾರಿಕೆ ಸ್ಥಾಪನೆ ಮಾಡುವ ಅಗತ್ಯವಾದರು ಏನಿದೆ ಎನ್ನುವುದು ಈ ಭಾಗದ ರೈತರ ಪ್ರಶ್ನೆಯಾಗಿದೆ.
ಎತ್ತಿನಹೊಳೆ ಕುಡಿಯುವ ನೀರಿಗು ತೊಂದರೆ: ತಾಲ್ಲೂಕಿನ ಸಾಸಲು ಹೋಬಳಿಯ ಗರುಡಗಲ್ಲು, ಮಂಚೇನಹಳ್ಳಿ ಸಮೀಪ ಕುಡಿಯುವ ನೀರಿನ ಎತ್ತಿನಹೊಳೆ ಯೋಜನೆಯಿಂದ ಬರುವ ನೀರನ್ನು ಸಂಗ್ರಹಿಸಲು ಬೈರಗೊಂಡ್ಲು ಜಲಾಶಯ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಹುಲಿಕುಂಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾದರೆ ನೀರು ಹರಿದು ಹೋಗುವುದೇ ಈ ಜಲಾಶಯದ ಕಡೆಗೆ. ಇಂತಹ ಪ್ರದೇಶದಲ್ಲೇ ಕೈಗಾರಿಕೆಗಳು ಸ್ಥಾಪನೆಯಾದರೆ ಇಲ್ಲಿಂದ ಹರಿದು ಬರುವ ಕೊಳಚೆ ನೀರು ಎತ್ತಿನಹೊಳೆಯ ನೀರು ಸಂಗ್ರಹಣೆ ಮಾಡುವ ಬೈರಗೊಂಡ್ಲು ಜಲಾಶಯಕ್ಕೆ ಹೋಗಿ ಸೇರುವ ಅಪಾಯಗಳಿವೆ. ಹೀಗಾಗಿ ಕುಡಿಯುವ ನೀರಿನ ಯೋಜನೆಗು ಕುತ್ತುಬರಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ನ.22 ರಂದು ರೈತರ ಸಭೆ: ಕೈಗಾರಿಕೆಗಳು ಸ್ಥಾಪನೆಯಾದರೆ ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸ್ಥಳಿಯರಿಗೆ ಉದ್ಯೋಗ ದೊರೆಯಲಿದೆ ಎನ್ನುವ ವಾದಗಳು ಸಹ ಇವೆ. ಆದರೆ ಈಗಾಗಲೇ ತಾಲ್ಲೂಕಿನಲ್ಲಿ ಸ್ಥಾಪನೆಯಾಗಿರುವ ಬಹುತೇಕ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆಯದಾಗಿದೆ. ಇಂತಹ ಅತಂತ್ರ ಸ್ಥಿತಿಯಲ್ಲಿ ಮೊತ್ತೊಂದು ಕೈಗಾರಿಕೆ ಸ್ಥಾಪನೆ ಅಗತ್ಯ ಇದೆಯ ಅಥವಾ ಬೇಡವ ಎನ್ನುವ ಕುರಿತಂತೆ ನ.22 ರಂದು ಬೆಳಿಗ್ಗೆ 11 ಗಂಟೆಗೆ ಹುಲಿಕುಂಟೆ ಗ್ರಾಮದಲ್ಲಿ ಸಭೆ ನಡೆಯಲಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

