ದೊಡ್ಡಬಳ್ಳಾಪುರ: ಕನ್ನಡ ಪರ ಸಂಘಟನೆಗಳನ್ನು ರೋಲ್ ಕಾಲ್ ಸಂಘಟನೆಗಳು ಎಂದು ಟೀಕಿಸಿರುವ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿಕೆ ಖಂಡಿಸಿ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪಂಜು ಹಿಡಿದು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ವಿವಿಧ ಕನ್ನಡ ಪರ ಸಂಘಟನೆಗಳ ಮುಂಖಡರು, ಮರಾಠಿಗರ ಮತಗಳನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿ ಸರ್ಕಾರ ಇತ್ತೀಚಿಗೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಆದರೆ ದಶಕಗಳಿಂದ ಕನ್ನಡ ನಾಡು, ನುಡಿಗಾಗಿ ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಪ್ರಾಮಾಣಿಕ ಹೋರಾಟದ ಫಲವಾಗಿ ಇಂದಿಗೂ ಬೆಳಗಾವಿಯಲ್ಲಿ ಕನ್ನಡ ಉಳಿದಿದೆ. ಅದರಂತೆ ರಾಜ್ಯದ ವಿವಿಧ ಗಡಿ ಜಿಲ್ಲೆಗಳಲ್ಲಿ ಕನ್ನಡಪರ ಸಂಘಟನೆಗಳು ಕನ್ನಡಿಗರ ದ್ವನಿಯಾಗಿ ಹೋರಾಟ ನಡೆಸುತ್ತಿವೆ. ಆದರೆ ಶಾಸಕ ಯತ್ನಾಳ ಅವರು ಕನ್ನಡಪರ ಸಂಘಟನೆಗಳನ್ನು ಡೋಂಗಿ ಎಂಬ ಹೇಳಿಕೆ ನೀಡಿ, ಕನ್ನಡಿಗರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಪರ ಸಂಘಟನೆಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿರುವ ಯತ್ನಾಳ ತಕ್ಷಣ ಕ್ಷಮೆ ಯಾಚಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತ.ನ.ಪ್ರಭುದೇವ್, ಸಂಜೀವ್ ನಾಯಕ್, ಸು.ನರಸಿಂಹಮೂರ್ತಿ, ನಂಜಪ್ಪ, ರಾಜಘಟ್ಟರವಿ, ಚೌಡರಾಜ್, ರಮೇಶ್, ಹನುಮಂತರೆಡ್ಡಿ ಮತ್ತಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

