ದೊಡ್ಡಬಳ್ಳಾಪುರ: ತಾಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ ಕೋಲಿಗೆರೆ ಗ್ರಾಮದಲ್ಲಿ ನೀಡಲಾದ ಖಾಲಿ ಸೈಟುಗಳಲ್ಲಿ ಮನೆ ನಿರ್ಮಿಸದೆ ತಿಪ್ಪೆಗುಂಡಿಗಳನ್ನಾಗಿ ಮಾಡಿರುವ ಫಲಾನುಭವಿಗಳಿಂದ ನಿವೇಶನಗಳನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಗೋವಿಂದರಾಜು ಎನ್ನುವವರು ಗ್ರಾಮಪಂಚಾಯಿತಿಗೆ ದೂರು ನೀಡಿದ್ದಾರೆ. ವಿಡಿಯೋ ನೋಡಿ..!
ಈ ಕುರಿತು ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಬರೆದಿರುವ ಪತ್ರದಲ್ಲಿ, ಕೋಲಿಗೆರೆ ಗ್ರಾಮದ ಸರ್ವೆ ನಂ1ರಲ್ಲಿ ನಿವೇಶನಗಳನ್ನು ಮಾಡಿ, ಜನತಾ ಸೈಟುಗಳನ್ನಾಗಿಸಿ ವಸತಿ ಹೀನರಿಗೆ ನೀಡಲಾಗಿತ್ತು. ಆದರೆ ಹಕ್ಕು ಪತ್ರ ಪಡೆದ ಫಲಾನುಭವಿಗಳು ಮನೆಗಳನ್ನು ನಿರ್ಮಿಸದೆ, ಖಾಲಿ ನಿವೇಶನಗಳಲ್ಲಿ ತಿಪ್ಪೆಗಳನ್ನು ಹಾಕಿದ್ದು, ಇದರಿಂದ ಸುತ್ತಮುತ್ತಲಿನ ಮನೆಗಳವರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ತಿಪ್ಪೆಯಲ್ಲಿ ಕಸ ಕೊಳೆತು ದುರ್ವಾಸನೆ ಹಾಗೂ ಸೊಳ್ಳೆ, ನೊಣಗಳ ಹಾವಳಿಯಿಂದಾಗಿ ಇಲ್ಲಿ ವಾಸವಿರುವ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ, ಅಲ್ಲದೆ ಹಾವು, ಚೇಳುಗಳು ಸೇರಿದಂತೆ ವಿಷಕಾರಿ ಜಂತುಗಳು ಸೇರಿ ಆತಂಕ ಸೃಷ್ಟಿಸಿರುವುದರಿಂದ ಈ ವ್ಯಾಪ್ತಿಯಲ್ಲಿ ಜೀವಿಸಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.
ವಸತಿ ಹೀನರೆಂದು ನಿವೇಶನ ಪಡೆದ ಫಲಾನುಭವಿಗಳು ಸುಮಾರು 25 ವರ್ಷಗಳಿಂದ ಮನೆಗಳನ್ನು ನಿರ್ಮಿಸದೆ ತಿಪ್ಪೆಗುಂಡಿಯನ್ನಾಗಿ ಮಾಡಿಕೊಂಡು ಸರ್ಕಾರದ ಆದೇಶ ಉಲ್ಲಂಘನೆ ಮಾಡಿರುವುದರಿಂದ ಕೂಡಲೇ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು, ತಿಪ್ಪೆಗುಂಡಿಯನ್ನು ತೆರವುಗೊಳಿಸಿ ಗ್ರಾಮಪಂಚಾಯಿತಿಗೆ ಸ್ವಾಧೀನ ಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನೋಟೀಸ್ ನೀಡಲಾಗಿದೆ: ನಿವೇಶನಗಳಲ್ಲಿ ಮನೆ ನಿರ್ಮಿಸದೆ ತಿಪ್ಪೆಗುಂಡಿಯನ್ನಾಗಿ ಮಾಡಿರುವ ಫಲಾನುಭವಿಗಳಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ ಎಂದು ಹೆಸರೇಳಲು ಇಚ್ಚಿಸದ ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಾಯಿತಿ ಅಧಿಕಾರಿ ಹರಿತಲೇಖನಿಗೆ ತಿಳಿಸಿದ್ದಾರೆ.
ತಿಪ್ಪೆಗುಂಡಿಗಳಿಂದ ಮಕ್ಕಳಿಗೆ ಅನಾರೋಗ್ಯ: ನಿವೇಶನಗಳಲ್ಲಿ ಮನೆ ನಿರ್ಮಿಸದೆ ತಿಪ್ಪೆಗುಂಡಿಯನ್ನಾಗಿ ಮಾಡಿರುವುದರಿಂದ ಮಕ್ಕಳಿಗೆ ಅನಾರೋಗ್ಯ ಕಾಡುತ್ತಿದ್ದು, ಚಿಕಿತ್ಸೆ ವೆಚ್ಚ ಭರಿಸಲು ತೀವ್ರ ತೊಂದರೆಯಾಗುತ್ತಿದೆ. ಗ್ರಾಪಂಗೆ ಮನವಿ ಪತ್ರ ಸಲ್ಲಿಸಿದರು, ಒತ್ತಡಕ್ಕೆ ಮಣಿಯುತ್ತಿರುವ ಗ್ರಾಮಪಂಚಾಯಿತಿ ಅಧಿಕಾರಿಗಳು ಕ್ರಮಕೈಗೊಳ್ಳಯತ್ತಿಲ್ಲವೆಂದು ಗೋವಿಂದರಾಜ್ ಹರಿತಲೇಖನಿಗೆ ತಿಳಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

