ಬೆಂಗಳೂರು: ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಿಧನರಾಗಿ ಇಂದಿಗೆ ಎರಡು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಅಂಬರೀಶ್ ಅವರನ್ನು ಅಪ್ಪಾಜಿ ಅಂತಲೇ ಕರೆಯುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಾಗೂ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ನಮ್ಮೆಲ್ಲರ ಮನಗಳಲ್ಲಿ ಸದಾ ಚಿರಸ್ಥಾಯಿ: ನನ್ನ ಪ್ರೀತಿಯ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ 2 ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲ್ಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ ಎಂದು ದರ್ಶನ್ ಬರೆದುಕೊಂಡಿದ್ದಾರೆ.
ಮಿಸ್ ಯೂ ಅಣ್ಣಾ: ಎಲ್ಲರಿಂದಲೂ ಪ್ರೀತಿಸಲ್ಪಡುವುದಕ್ಕೂ, ಎಲ್ಲರೂ ಭಯಪಡುವುದಕ್ಕೂ ಬಹಳ ವ್ಯತ್ಯಾಸವಿದೆ. ಎಲ್ಲರ ಪ್ರೀತಿ, ಅಭಿಮಾನ ಗಳಿಸುವಂಥದ್ದಾಗಿತ್ತು ಅಂಬರೀಶಣ್ಣನ ವ್ಯಕ್ತಿತ್ವ. Miss you Anna ಎಂದು ಸಂಸದ ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ.
ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು 2018ರ ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಸುಸ್ತಾಗಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಂಬರೀಶ್ ನಿಧನಕ್ಕೆ ರಾಜಕೀಯ, ಚಿತ್ರರಂಗ ಸೇರಿದಂತೆ ದೇಶಾದ್ಯಂತ ಕಂಬನಿ ಮಿಡಿದಿತ್ತು.
ಇಂದು ಅವರ ಎರಡನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ಅಂಬಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಹಾಗೂ ಇತರ ಗಣ್ಯರು ಅವರ ಸಮಾಧಿPಗೆ ತೆರಳಿ ಪೂಜೆ ಸಲ್ಲಿಸಿದರು. ಇದೇ ವೇಳೆ ನಟ ದರ್ಶನ್ ಕೂಡ ತೆರಳಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

