ದೊಡ್ಡಬಳ್ಳಾಪುರ: ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವಂತೆ ಒತ್ತಾಯಿಸಿ ಇಂದಿನಿಂದ ಕರೆ ನೀಡಲಾಗಿದ್ದ ಓಬದೇನಹಳ್ಳಿ ಕೈಗಾರಿಕಾ ಪ್ರದೇಶದ ಬಂದ್ ಅನ್ನು ಹಿರಿಯ ಅಧಿಕಾರಿಗಳ ಮನವಿಯ ಮೇರೆಗೆ ಮುಂದೂಡಲಾಗಿದೆ.
ಓಬದೇನಹಳ್ಳಿ ಕೈಗಾರಿಕಾ ಪ್ರದೇಶದ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಭೂಮಿ ಕೊಟ್ಟ ರೈತರ ಕುಟುಂಬಕ್ಕೆ ವಿದ್ಯಾರ್ಹತೆ ತಕ್ಕಂತೆ ಉದ್ಯೋಗ ನೀಡಲು ಸರ್ಕಾರದ ಆದೇಶವಿದ್ದರು, ಪಾಲಿಸದ ಕಾರ್ಖಾನೆಗಳ ವಿರುದ್ದ ದೂರು ದಾಖಲಿಸಿ, ಕಾನೂನು ಕ್ರಮಕೈಗೊಳ್ಳುವಂತೆ ಇಂದು ಬೆಳಗ್ಗೆ 7 ರಿಂದ 48 ಗಂಟೆಗಳ ಕಾಲ ಕೈಗಾರಿಕಾ ಪ್ರದೇಶವನ್ನು ಬಂದ್ ಮಾಡಲು ಸಿದ್ದತೆ ನಡೆಸಲಾಗಿತ್ತು. ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಒಂದು ತಿಂಗಳು ಗಡುವು ಕೇಳಿದ ಕಾರಣ ಬಂದ್ ಕೈ ಬಿಡಲಾಗಿದೆ.
ಸೋಮವಾರ ಸಂಜೆ ಕೆಐಎಡಿ ಕಾರ್ಯನಿರ್ವಹಣಾಧಿಕಾರಿ ನರಸಿಂಹಮೂರ್ತಿ ಹಾಗು ಡಿವೈಎಸ್ಪಿ ಟಿ.ರಂಗಪ್ಪ ನೇತೃತ್ವದ ತಂಡ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ, ಬಂದ್ ಕೈಬಿಡುವಂತೆ ಮನವಿ ಮಾಡಿದರು. ರೈತರಿಗೆ ದೊರಕ ಬೇಕಾದ ನ್ಯಾಯಸಮ್ಮತ ಉದ್ಯೋಗ ದೊರಕಿಸಲು ಕಾರ್ಖಾನೆ ಮಾಲೀಕರ ಸಭೆ ನಡೆಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.
ಸಭೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮೋಹನ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಕೆಐಎಡಿ ಸಹಾಯಕ ಅಧಿಕಾರಿ ಆಂಜನೇಯ, ಓಬದೇನಹಳ್ಳಿ ಕೈಗಾರಿಕಾ ಪ್ರದೇಶದ ರೈತರ ಹೋರಾಟ ಸಮಿತಿಯ ಮುಖಂಡರು ಹಾಜರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

