ದೊಡ್ಡಬಳ್ಳಾಪುರ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸಿ ಎಂದು ಒತ್ತಾಯಿಸುವ ಬಹುತೇಕ ಕನ್ನಡಿಗರು, ಕನ್ನಡ ಭಾಷೆ ಬಳಸುವಲ್ಲಿ ಮಾತ್ರ ಹಿಂಜರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ಹಂತದಲ್ಲಿಯೂ ಕನ್ನಡ ಭಾಷೆಯ ಬಳಕೆ ಹೆಚ್ಚಾದಾಗ ಮಾತ್ರ ಕನ್ನಡ ಭಾಷೆ ಉಳಿಯಲಿದೆ ಎಂದು ಜನಪ್ರಿಯ ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ ಹೇಳಿದರು.
ನಗರದ ಮಹಿಳಾ ಸಮಾಜದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಂಗ್ಲ ಭಾಷೆ ಬಳಕೆ ಮಾಡಿದರೆ ಮಾತ್ರ ನಮಗೆ ಗೌರವ ಎನ್ನುವ ಭಾವನೆ ಎಲ್ಲೆಡೆ ಬೇರೂರುತ್ತಿದೆ. ಕನ್ನಡ ಭಾಷೆಯನ್ನು ನಾವು ನಾಚಕಿಕೆ ಪಟ್ಟುಕೊಳ್ಳದೇ ಬಳಸಿದರೆ ಭಾಷೆ ತಾನಾಗಿಯೇ ಬೆಳೆಯುತ್ತದೆ. ಕನ್ನಡದಲ್ಲಿ ಕನಿಷ್ಟ ಸಹಿ ಮಾಡುವ ಮೂಲಕ ನಮ್ಮ ಅಸ್ತಿತ್ವವನ್ನು ತೋರಿಸಬೇಕಿದೆ. ಇಂದು ಬಹಳಷ್ಟು ಮಂದಿ ತಮ್ಮ ಮಕ್ಕಳಿಗೆ ಆಂಗ್ಲ ಶಾಲೆಗೆ ಸಾಲ ಸೋಲ ಮಾಡಿ ಸೇರಿಸುತ್ತಿದ್ದಾರೆ. ಮುಖ್ಯವಾಗಿ ತಾಯಂದಿರು, ಮಕ್ಕಳ ಶಿಕ್ಷಣ ಹೀಗೆಯೇ ಇರಬೇಕೆಂದು ಹಠ ಮಾಡಿ ಒಲ್ಲದ ಶಿಕ್ಷಣ ನೀಡುತ್ತಿದ್ದಾರೆ. ಆದರೆ ಭಾಷೆಗೂ ಬುದ್ದಿಗೂ ಸಂಬಂಧವಿಲ್ಲ ಎನ್ನುವುದನ್ನು ನಾವು ಅರಿಯಬೇಕಿದೆ. ಇಂದು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು ಸಹ ತಮ್ಮ ಕೌಶಲ್ಯ ಹಾಗೂ ಬುದ್ದಿಶಕ್ತಿಯಿಂದ ಉನ್ನತ ಹುದ್ದೆಗಳಲ್ಲಿದ್ದಾರೆ ಎಂದರು.
ಬರೀ ಅಂಕ ಗಳಿಸಿದರೆ ಸಾಲದು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಭಾಷಾ ಸಂವಹನ, ಕೌಶಲ್ಯ ಹಾಗ ವೃತ್ತಿಪರತೆಗೆ ಪರಕವಾದ ಅನುಭವಗಳನ್ನು ಪಡೆದುಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಿವೃತ್ತ ಪ್ರಾಂಶುಪಾಲರಾದ ಎಸ್.ರಾಜಲಕ್ಷ್ಮೀ ಮಾತನಾಡಿ, ಮಕ್ಕಳಿಗೆ ಬರೀ ಪಠ್ಯವನ್ನು ಓದಿಸಿ, ಅಂಕ ಗಳಿಸಿ ಎಂದರಷ್ಟೇ ಸಾಲದು ಅವರಿಗೆ ಬದುಕಿನ ಅನುಭವ, ವ್ಯವಹಾರ ಜ್ಞಾನವನ್ನು ಕಲಿಸಬೇಕಿದೆ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳುವಂತೆ ಮಾಡುವ ಹೊಣೆಗಾರಿಕೆ ಪೋಷಕರ ಮೇಲಿದೆ ಎಂದರು.
ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್.ಪ್ರಭಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಗಳಿಸಿರುವ ಮಹಿಳಾ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಕನ್ನಡ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ಕರ್ನಾಟಕ ಏಕೀಕರಣ ಕುರಿತ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಕಾರ್ಯದರ್ಶಿ ಎಚ್.ಸಿ.ದೇವಕಿ, ಉಪಾಧ್ಯಕ್ಷೆ ಕೆ.ಜೆ.ಕವಿತ, ಸಹ ಕಾರ್ಯದರ್ಶಿ ಟಿ.ಪಿ.ವರಲಕ್ಷ್ಮೀ, ಖಜಾಂಚಿ ಜಿ.ವಿ.ಯಶೋದ, ನಿರ್ದೇಶಕರಾದ ವಿ.ನಿರ್ಮಲ, ಎಸ್.ಗೌರಮ್ಮ, ಹಾಗೂ ಮಹಿಳಾ ಸಮಾಜದ ಸಿಬ್ಬಂದಿ ಭಾಗವಹಿಸಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

