ದೊಡ್ಡಬಳ್ಳಾಪುರ: ತಾಲುಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ ಕೋಲಿಗೆರೆ ಗ್ರಾಮದಲ್ಲಿ ನೀಡಲಾದ ಖಾಲಿ ಸೈಟುಗಳಲ್ಲಿದ್ದ ತಿಪ್ಪೆಗುಂಡಿಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕೋಲಿಗೆರೆ ನಿವಾಸಿ ಗೋವಿಂದರಾಜ್ ಎನ್ನುವವರು ನೀಡಲಾಗಿದ್ದ ಮನವಿಯ ಹಿನ್ನೆಲೆ, ಈ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಗ ವೇಳೆ ಕೆಲವರು ವಿರೋಧ ವ್ಯಕ್ತಪಡಿಸಿದರಾದರೂ ಸಕ್ಕರೆಗೊಲ್ಲಹಳ್ಳಿ ಪಿಡಿಒ ಸೌಮ್ಯ ಮತ್ತು ಸಿಬ್ಬಂದಿಗಳು ದಿಟ್ಟ ಕಾರ್ಯಾಚರಣೆ ನಡೆಸಿ, ಸುಮಾರು 6 ತಿಪ್ಪೆಗಳನ್ನು ತೆರವುಗೊಳಿಸಿದ್ದು ಮತ್ತೆ ತಿಪ್ಪೆಹಾಕದಂತೆ ನಿವೇಶನ ಪಡೆದ ಫಲಾನುಭವಿಗಳಿಗೆ ಎಚ್ಚರಿಕೆ ನೀಡಿರುವುದು ಸ್ಥಳೀಯರ ಪ್ರಶಂಸೆಗೆ ಕಾರಣವಾಗಿದೆ.
ಹಿನ್ನೆಲೆ: ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಬರೆದಿರುವ ಪತ್ರದಲ್ಲಿ, ಕೋಲಿಗೆರೆ ಗ್ರಾಮದ ಸರ್ವೆ ನಂ1ರಲ್ಲಿ ನಿವೇಶನಗಳನ್ನು ಮಾಡಿ, ಜನತಾ ಸೈಟುಗಳನ್ನಾಗಿಸಿ ವಸತಿ ಹೀನರಿಗೆ ನೀಡಲಾಗಿತ್ತು. ಆದರೆ ಹಕ್ಕು ಪತ್ರ ಪಡೆದ ಫಲಾನುಭವಿಗಳು ಮನೆಗಳನ್ನು ನಿರ್ಮಿಸದೆ, ಖಾಲಿ ನಿವೇಶನಗಳಲ್ಲಿ ತಿಪ್ಪೆಗಳನ್ನು ಹಾಕಿದ್ದು, ಇದರಿಂದ ಸುತ್ತಮುತ್ತಲಿನ ಮನೆಗಳವರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ತಿಪ್ಪೆಯಲ್ಲಿ ಕಸ ಕೊಳೆತು ದುರ್ವಾಸನೆ ಹಾಗೂ ಸೊಳ್ಳೆ, ನೊಣಗಳ ಹಾವಳಿಯಿಂದಾಗಿ ಇಲ್ಲಿ ವಾಸವಿರುವ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ, ಅಲ್ಲದೆ ಹಾವು, ಚೇಳುಗಳು ಸೇರಿದಂತೆ ವಿಷಕಾರಿ ಜಂತುಗಳು ಸೇರಿ ಆತಂಕ ಸೃಷ್ಟಿಸಿರುವುದರಿಂದ ಈ ವ್ಯಾಪ್ತಿಯಲ್ಲಿ ಜೀವಿಸಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.
ವಸತಿ ಹೀನರೆಂದು ನಿವೇಶನ ಪಡೆದ ಫಲಾನುಭವಿಗಳು ಸುಮಾರು 25 ವರ್ಷಗಳಿಂದ ಮನೆಗಳನ್ನು ನಿರ್ಮಿಸದೆ ತಿಪ್ಪೆಗುಂಡಿಯನ್ನಾಗಿ ಮಾಡಿಕೊಂಡು ಸರ್ಕಾರದ ಆದೇಶ ಉಲ್ಲಂಘನೆ ಮಾಡಿರುವುದರಿಂದ ಕೂಡಲೇ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು, ತಿಪ್ಪೆಗುಂಡಿಯನ್ನು ತೆರವುಗೊಳಿಸಿ ಗ್ರಾಮಪಂಚಾಯಿತಿಗೆ ಸ್ವಾಧೀನ ಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದರು, ಈ ಕುರಿತು ಹರಿತಲೇಖನಿ ನ.23ರಂದು ವರದಿ ಪ್ರಕಟಿತ್ತು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

