ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ತಿ.ನರಸೀಪುರ ತಾಲ್ಲೂಕಿನ ಶ್ರೀ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಸಂಕಿರ್ಣದ ಪುನರ್ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದರು.
ಶ್ರೀ ಭ್ರಮರಾಂಭ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಒಟ್ಟು 30 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣವಾಗುತ್ತಿದೆ. ಮೊದಲ ಹಂತದಲ್ಲಿ 5 ಕೋಟಿ ರೂ. ಬಿಡುಗಡೆ ಮಾಡಿದ್ದು, 2ನೇ ಹಂತದಲ್ಲಿ 10 ಕೋಟಿ ರೂ. ಹಣವನ್ನು ಒಂದು ವಾರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ. ಉಳಿಕೆ ಅನುದಾನದನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದ ದೇವಾಲಯಗಳ ಅಭಿವೃದ್ಧಿಗೆ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ. ದೇವರು ಕೊಟ್ಟಿದ್ದನ್ನು ದೇವರಿಗೇ ಅರ್ಪಿಸುತ್ತಿದ್ದೇವೆ. ನನಗಿನ್ನೂ ಎರಡು ವರ್ಷ ಅವಧಿಯಿದೆ. ಅಷ್ಟರಲ್ಲಿ ದೇವಾಲಯದ ಅಭಿವೃದ್ಧಿ ಕಾರ್ಯಗಳೂ ಸೇರಿದಂತೆ ಮುಂತಾದ ಕೆಲಸಗಳು ಪೂರ್ಣಗೊಳಿಸಬೇಕು ಎನ್ನುವುದು ನನ್ನ ಬಯಕೆಯಾಗಿದೆ ಎಂದರು.
ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಗುತ್ತಿಗೆದಾರರು ಹಗಲಿರುಳು ಶ್ರಮಿಸಬೇಕು. ಈ ಬಗ್ಗೆ ಗುತ್ತಿಗೆದಾರರೊಂದಿಗೂ ಮಾತನಾಡಿದ್ದೇನೆ. ಗುತ್ತಿಗೆದಾರರೂ ಲಾಭವನ್ನು ಬಯಸದೆ, ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಭವ್ಯವಾದ ದೇವಾಲಯವನ್ನು ನಿರ್ಮಿಸಬೇಕು. ದೇವಸ್ಥಾನ ನಿರ್ಮಾಣದ ಪ್ರಗತಿಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ವಾರಕ್ಕೊಮ್ಮೆ ಬಂದು ಪರಿಶೀಲಿಸಲಿ ಎಂದು ತಿಳಿಸಿದರು.
ಈಗಾಗಲೇ ರಾಜ್ಯದ 136 ದೇವಾಲಯಗಳಿಗೆ ತಲಾ ಒಂದು ಕೋಟಿ ರೂ.ನಂತೆ 136 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನನ್ನ ಉಳಿದ ಎರಡು ವರ್ಷದ ಅವಧಿಯಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಬೇಕೆಂದು ಅಪೇಕ್ಷಿಸಿದ್ದೇನೆ ಎಂದು ಆಶಯ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು.
ರಾಜ್ಯದ ಜಿಲ್ಲಾ ಹಾಗೂ ಗ್ರಾಮಗಳ ರಸ್ತೆ, ಸೇತುವೆ ನಿರ್ಮಾಣ ಹಾಗೂ ಸರ್ಕಾರಿ ಕಟ್ಟಡಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ನರೆಯಿಂದ ಸಂಕಷ್ಟಕ್ಕೆ ಒಳಗಾದ ನಿರಾಶ್ರಿತರು ಹಾಗೂ ರೈತರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಮೀರಿ ಹೆಚ್ಚಿನ ಪರಿಹಾರ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎಸ್.ಎ.ರಾಮದಾಸ್, ಎಂ.ಅಶ್ವಿನ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯತ್ ಸಿಇಒ ಡಿ.ಭಾರತಿ, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಎಂ.ಎನ್.ಸಂದೀಶ್ ಹಂಚೆ ಇನ್ನಿತರರು ಇದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

