ದೊಡ್ಡಬಳ್ಳಾಪುರ: ಲಾಕ್‌ಡೌನ್ ಸಂದರ್ಭದಲ್ಲಿ ರೈತರಿಂದ ಖರೀದಿಸುವ ಹಾಲಿನ ಬೆಲೆಯಲ್ಲಿ ಖಡಿತಮಾಡಲಾಗಿರುವ ₹4ಗಳನ್ನು ರೈತರ ಖಾತೆಗೆ ಜಮಾ ಮಾಡದೇ ಇದ್ದರೆ ಹಾಗೂ ರೈತರಿಂದ ಖರೀದಿಸುವ ಹಾಲಿನ ಬೆಲೆಯನ್ನು ಹೆಚ್ಚು ಮಾಡದೇ ಇದ್ದರೆ ಹೋರಾಟ ನಡೆಸಲಾಗುವುದು ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್ ಹೇಳಿದರು.
ಅವರು ನಗರದ ಬೆಸೆಂಟ್ ಪಾರ್ಕ್‌ನಲ್ಲಿ ಬುಧವಾರ ನಡೆದ ಬಮೂಲ್ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾದೇಶಿಕ ಸಭೆಯಲ್ಲಿ ಮಾತನಾಡಿದರು.
ಲಾಕ್‌ಡೌನ್ ಸಂದರ್ಭದಲ್ಲೂ ಸಹ ರೈತರು, ಸಹಕಾರ ಸಂಘದ ಹಾಗೂ ಒಕ್ಕೂಟದ ಸಿಬ್ಬಂದಿ ಕೆಲಸ ನಿರ್ವಹಸಿದ್ದಾರೆ. ಆದರೆ ರೈತರಿಂದ ಖರೀದಿಸುವ ಹಾಲಿಗೆ ಮಾತ್ರ ಬೆಲೆ ಕಡಿತಮಾಡಲಾಗಿದೆ.ರೈತರು ಪ್ರಶ್ನೆ ಮಾಡಿಲ್ಲ ಅಂದ ಮಾತ್ರಕ್ಕೆ ಇದು ರೈತರ ಅಸಹಾಯಕತೆ ಎಂದು ಭಾವಿಸದೆ ಈಗ ಬೆಲೆ ಹೆಚ್ಚು ಮಾಡಬೇಕು. ಒಕ್ಕೂಟದಲ್ಲಿ ಕೆಲಸ ಮಾಡುವ ಅಧಿಕಾರಿಗಳ ಸಂಬಳ ಮಾತ್ರ ಕಡಿಮೆಯಾಗಿಲ್ಲ.ಆದರೆ ರೈತರ ಹಾಲಿನ ಬೆಲೆ ಏಕೆ ಕಡಿತಮಾಡಬೇಕು ಎಂದು ಪ್ರಶ್ನಿಸಿದರು.
ಸದ್ಯಕ್ಕೆ 8 ಸಾವಿರ ಟನ್ ಹಾಲಿನ ಪುಡಿ ದಾಸ್ತಾನು ಇದೆ. ಇದರಿಂದ ರಾಜ್ಯದ ಎಲ್ಲಾ ಮಹಾಮಂಡಲಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ರೈತರ ಮೇಲೆ ಬೀರಲಿದೆ. ಗ್ರಾಮೀಣ ಭಾಗದ ಜನರ ಆರ್ಥಿಕ ಶಕ್ತಿಯಾಗಿರುವ ಹೈನುಗಾರಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಹಾಲು ಒಕ್ಕೂಟಗಳ ನೆರವಿಗೆ ಬಂದಂತೆ ಈಗಲು ಸಹ ಮುಖ್ಯಮಂತ್ರಿಗಳ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲಾದ ಕ್ಷೀರಭಾಗ್ಯ ಯೋಜನೆಯಿಂದ ರೈತರ ಹಾಲಿಗೆ ಬೇಡಿಕೆ ಹೆಚ್ಚಾಗಿತ್ತು. ಅಲ್ಲದೆ ಪ್ರತಿ ಲೀಟರ್ ಹಾಲಿಗೆ ₹3 ಪ್ರೋತ್ಸಾಹವನ್ನು ನೀಡಿದ್ದರು ಎಂದರು.
ಈ ಬಾರಿ ತಾಲ್ಲೂಕಿನಲ್ಲಿ ರಾಗಿ ಇಳುವರಿ ಉತ್ತಮವಾಗಿದೆ. ಇದರಿಂದಾಗಿ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಖರೀದಿ ಕೇಂದ್ರ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದರು ಯಾವುದೇ ರೀತಿಯ ಸ್ಪಂಧನೆ ಇಲ್ಲದಾಗಿದೆ. ಅಲ್ಲದೆ ಒಂದು ಎಕರೆಗೆ ಇಂತಷ್ಟೇ ಚೀಲ ರಾಗಿ ಖರೀದಿ ಮಾಡಬೇಕು ಎನ್ನುವ ಮಿತಿಯನ್ನು ಹಾಕಿರುವುದು ಸರಿಯಲ್ಲ ಎಂದರು.
ತಾಲ್ಲೂಕಿನ ರೈತರು ಸರಬರಾಜು ಮಾಡುವ ಹಾಲಿಗೆ ಪ್ರತಿ ತಿಂಗಳು ₹11 ಕೋಟಿ ಖರೀದಿ ಹಣ ಹಾಗೂ ಸಹಾಯಧನವಾಗಿ ₹2 ಕೋಟಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಹಾಲಿನ ಟೆಟ್ರಾಪ್ಯಾಕ್ ಹಾಗೂ ಪಶು ಆಹಾರ ತಯಾರಿಕಾ ಘಟಕ ಸ್ಥಾಪನೆಗೆ ಭೂಮಿ ನೀಡಲಾಗುವುದು ಕೆಎಂಎಫ್ ವತಿಯಿಂದ ಎರಡೂ ಘಟಕಗಳ ಸ್ಥಾಪನೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗಷ್ಟೇ ನಿಧನರಾದ ತಾಲ್ಲೂಕಿನ ಬಮೂಲ್ ಮಾಜಿ ನಿರ್ದೇಶಕ ಎನ್.ಹನುಮಂತೇಗೌಡ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಜಯರಾಂ, ಟಿಎಪಿಎಂಸಿಎಸ್ ಅಧ್ಯಕ್ಷ ಡಿ.ಸಿದ್ದರಾಮಣ್ಣ, ಕಾಂಗ್ರೆಸ್ ಮುಖಂಡರಾದ ತಿ.ರಂಗರಾಜು, ಬಿ.ಎಚ್.ಕೆಂಪಣ್ಣ, ಬಮೂಲ್ ಪ್ರಧಾನ ವ್ಯವಸ್ಥಾಪಕ ಬಿ.ಕೆ.ಜಗದೀಶ್, ವ್ಯವಸ್ಥಾಪಕ ಮಾಯಣ್ಣ, ಬಮೂಲ್ ಕಲ್ಯಾಣ ನಿಧಿ ಟ್ರಸ್ಟ್ ಸಿಇಒ ಡಾ.ಪ್ರಸನ್ನಕುಮಾರ್,ದೊಡ್ಡಬಳ್ಳಾಪುರ ಹಾಲು ಶೀಥಲ ಕೇಂದ್ರದ ವ್ಯವಸ್ಥಾಪಕ ಡಾ.ಗೋಪಾಲಕೃಷ್ಣ ಇದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

