ಬೆಂಗಳೂರು: ದೇಶದ ಸಾರ್ವಭೌಮತೆ ಹಾಗೂ ಪ್ರಜೆಗಳ ಹಕ್ಕುಗಳ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ವಿ. ಪ್ರಸಾದ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿಂದು ನಡೆದ “ಸಂವಿಧಾನ ಸಮರ್ಪಣಾ ದಿನ ಹಾಗೂ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ”ದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ದೇಶಕ್ಕೆ ಉತ್ತಮ ಕಾನೂನಿನ ಅವಶ್ಯ ಹಿನ್ನೆಲೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿದ್ದು, ಅಭಿನಂದನಾರ್ಹ ಎಂದರಲ್ಲದೆ, ವಿಶ್ವದ ಹಲವಾರು ಲಿಖಿತ ಮತ್ತು ಅಲಿಖಿತ ಸಂವಿಧಾನಗಳನ್ನು ಅಧ್ಯಯನ ಮಾಡುವ ಮೂಲಕ ನಮ್ಮ ದೇಶಕ್ಕೆ ಬೇಕಾದಂತಹ ಕಾನೂನುಗಳನ್ನು ಅಳವಡಿಸಿಕೊಂಡು ಜನರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತಲು ಭಾರತದ ಸಂವಿಧಾನ ಸಹಕಾರಿಯಾಗಿದೆ ಎಂದರು.
ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯ ಪಾಲನೆ ಮಾಡುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರಲ್ಲದೆ, ಕೋವಿಡ್ ನಿಂದಾಗಿ ಕಾರ್ಯಕ್ರಮ ಸರಳವಾಗಿ ಆಚರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಅವರು ಮಾತನಾಡಿ ದೇಶದ ಜನರನ್ನು ಶಕ್ತಗೊಳಿಸಲು ಸಂವಿಧಾನದಲ್ಲಿ ಅವಕಾಶಗಳನ್ನು ನೀಡಿದ್ದು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು ಹಾಗೂ ಸಂವಿಧಾನ ಸಮರ್ಪಣಾ ದಿನಾಚರಣೆ ಎಂಬುದು ಡಾ.ಬಿ.ಆರ್.ಅಂಬೇಡ್ಕರ್‍ಗೆ ನೀಡುವ ಗೌರವ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಮ್.ನಾಗರಾಜ ಅವರು ಸಂವಿಧಾನ ಸಮರ್ಪಣಾ ದಿನದ ಪ್ರತಿಜ್ಞಾವಿಧಿ ಭೋಧಿಸಿದರು.
ಕಾರ್ಯಕ್ರಮದಲ್ಲಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ, ಮುಖ್ಯ ಲೆಕ್ಕಾಧಿಕಾರಿ ರಮಣರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

