ಬೆಂಗಳೂರು: ಕೋವಿಡ್ ಸೋಂಕಿಗೆ ಶೀಘ್ರದಲ್ಲೇ ಲಸಿಕೆ ಲಭ್ಯವಾಗಲಿದ್ದು, ಸಂಗ್ರಹಣೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ವಿತರಣೆಗೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರಾದ ಬಿ.ಎನ್.ಬಚ್ಚೇಗೌಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಜ್ವಲಂತ ಸಮಸ್ಯೆಯಾಗಿರುವ ಕೋವಿಡ್ನಿಂದಾಗಿ ದೇಶಾದ್ಯಂತ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಇದರ ಕುರಿತಾಗಿ ಜಿಲ್ಲೆಯ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರಲ್ಲದೆ, ಲಸಿಕೆ ವಿತರಣೆಗೆ ಅವಶ್ಯವಿರುವ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು. ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುಳಾದೇವಿ ಅವರು ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 17,482 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 16,933 ಮಂದಿ ಗುಣಮುಖರಾಗಿದ್ದಾರೆ, 407 ಸಕ್ರಿಯ ಪ್ರಕರಣಗಳಿದ್ದು, 142 ಮಂದಿ ಮೃತಪಟ್ಟಿದ್ದಾರೆ. ಜುಲೈನಲ್ಲಿ ಶೇ.24.09% ರಷ್ಟಿದ್ದ ಕೋವಿಡ್ ಪಾಸಿಟಿವ್ ಪ್ರಮಾಣ ನವೆಂಬರ್ ವೇಳೆಗೆ ಶೇ.3.85% ರಷ್ಟು ತಲುಪಿದ್ದು, ಒಟ್ಟು ಚೇತರಿಕೆ ಪ್ರಮಾಣ ಶೇ.96.81% ರಷ್ಟಿದ್ದು, ರಾಜ್ಯದಲ್ಲಿ ಜಿಲ್ಲೆ 14ನೇ ಸ್ಥಾನದಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ರೈತರು ಸ್ವಯಂಪ್ರೇರಿತವಾಗಿ ತಮ್ಮ ಜಮೀನಿನಲ್ಲಿ ತೆರವುಗೊಳಿಸಲಾಗಿರುವ ನೀಲಗಿರಿ ಮಾಹಿತಿ ವಿವರವನ್ನು ಹಾಗೂ ಜಿಲ್ಲೆಯಲ್ಲಿರುವ ಶೇಕಡಾವಾರು ಅರಣ್ಯ ಪ್ರಮಾಣದ ವಿವರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂಗ್ರಹಿಸಿ ನೀಡಲು ಸಂಸದರು ಸೂಚಿಸಿದಾಗ, ಸಾಮಾಜಿಕ ಅರಣ್ಯ ವಿಭಾಗ ಮತ್ತು ಸಾಮಾನ್ಯ ಅರಣ್ಯ ಪ್ರದೇಶ ಸೇರಿದಂತೆ ರೈತರು ತಮ್ಮ ಜಮೀನಿನಲ್ಲಿ ಮರಗಳನ್ನು ಬೆಳೆದು ಅರಣ್ಯ ಪ್ರದೇಶವಾಗಿ ಅಭಿವೃದ್ಧಿ ಪಡಿಸಿರುವ ಮಾಹಿತಿಯನ್ನು ಶೀಘ್ರವಾಗಿ ಸಂಗ್ರಹಿಸಿ ನೀಡಲಾಗುವುದು ಎಂದು ತಿಳಿಸಿದ ಸಾಮಾಜಿಕ ಅರಣ್ಯ ಅಧಿಕಾರಿ ಭಾಸ್ಕರ್ ಅವರು ಜಿಲ್ಲಾದ್ಯಂತ 50 ಸಾವಿರಕ್ಕೂ ಹೆಚ್ಚು ಹೆಬ್ಬೇವು, ಸಿಲ್ವರ್, ರಕ್ತಚಂದನ, ಶ್ರೀಗಂಧವನ್ನು ನೀಡಲಾಗಿದ್ದು, 61 ಸಾವಿರ ಮಾನವ ದಿನಗಳನ್ನು ಸೃಜಿಸಿ ರೈತರ ಹೊಲಗಳಲ್ಲಿ ಸಸಿ ನೆಡುವ ಹಾಗೂ ನೆಡು ತೋಪುಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ನರೇಗಾ ಯೋಜನೆಯಡಿ 2020-21ನೇ ಸಾಲಿನ ಪ್ರಗತಿಯ ಕುರಿತು ಮಾಹಿತಿ ಕೇಳಿದಾಗ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ ಅವರು ಮಾತನಾಡಿ 11 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದ್ದು 13.82 ಲಕ್ಷ ಮಾನವ ದಿನಗಳ ಗುರಿ ಸಾಧಿಸಿಲಾಗಿದೆ ಎಂದರಲ್ಲದೆ, ಜಿಲ್ಲಾದ್ಯಂತ 3000 ಕ್ಕೂ ಹೆಚ್ಚು ಕಿಚನ್ ಗಾರ್ಡನ್ ನಿರ್ಮಿಸಲಾಗಿದೆ ಎಂದು ಸಭೆಗೆ ಮಾಹಿತಿ ತಿಳಿಸಿದರು ಅಲ್ಲದೆ ಮುಂದಿನ ದಿನಗಳಲ್ಲಿ 150 ಮಾನವ ದಿನವನ್ನು ಸೃಜಿಸುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸಂಸದರು ಭರವಸೆ ನೀಡಿದರು.
ಜಿಲ್ಲೆಯ ಜನರಿಗೆ ಸ್ಥಳೀಯವಾಗಿ, ಸಕಾಲದಲ್ಲಿ ಸರ್ಕಾರಿ ಕಾರ್ಯಕ್ರಮಗಳು ತಲುಪುವ ನಿಟ್ಟಿನಲ್ಲಿ ಅಧಿಕಾರಿಗಳು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿ.ಪ್ರಸಾದ್ ಅವರು ಮಾತನಾಡಿ ಜಿಲ್ಲೆಯಲ್ಲಿ ಸಮುದಾಯ ಶೌಚಾಲಯಗಳು ನೆನೆಗುದಿಗೆ ಬಿದ್ದಿದ್ದು ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗೆ ಸೂಚಿಸಿದರಲ್ಲದೆ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪಿಎಂಎವೈ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ಶೀಘ್ರವೇ ಪೂರ್ಣಗೊಳಿಸಲು ಫಲಾನುಭವಿಗಳಿಗೆ ಅಧಿಕಾರಿಗಳು ಉತ್ತೇಜಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ ಅವರು ಮಾತನಾಡಿ ಪ್ರತಿ ಹಳ್ಳಿಯಲ್ಲಿ ಸಂಸ್ಕರಿಸಿದ ಕುಡಿಯುವ ನೀರನ್ನು ಸರಬರಾಜು ಮಾಡಲು ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಜಾರಿಗೊಳಿಸಿದ್ದು, ಪ್ರತಿ ನಾಗರಿಕರಿಗೆ 55 ಲೀಟರ್ ನೀರು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರಲ್ಲದೆ, ಜಿಲ್ಲೆಯಲ್ಲಿ ಶಾಶ್ವತ ನೀರಿನ ಮೂಲಗಳು ಇಲ್ಲದಿರುವ ಕಾರಣ ಈ ಯೋಜನೆ ಅನುಷ್ಠಾನ ಕಷ್ಟವಾಗುತ್ತಿದೆ ಎಂದು ಸಂಸದರ ಗಮನಕ್ಕೆ ತಂದರು.
2020-21ನೇ ಸಾಲಿನ ಸಂಸದರ ಆದರ್ಶ ಗ್ರಾಮ ಕ್ರಿಯಾ ಯೋಜನೆಗೆ ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಯಿತು ಎಂದು ಮಾಹಿತಿ ನೀಡಿದರಲ್ಲದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಂಜುನಾಥ್, ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಲಕ್ಷ್ಮೀನಾರಾಯಣ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

