ಬೆಂಗಳೂರು: ಮೀನಿನ ಊಟ ತಿಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ವಿವಾದಕ್ಕೆ ಒಳಗಾಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹನುಮ ಜಯಂತಿಯಂದು ಕೋಳಿ ಊಟ ತಿಂದು ಹನುಮ ಭಕ್ತರ ಆಕ್ರೋಶಕ್ಕೆ ಒಳಗಾಗಿದ್ದಾರೆ.
ಭಾನುವಾರ ನಡೆದ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹುಟ್ಟೂರಿಗೆ ಸಿದ್ದರಾಮಯ್ಯ ತೆರಳಿದ್ದರು. ಆ ಸಂದರ್ಭ ಚಿಕನ್ ಊಟಕ್ಕೆ ಮುಂದಾದ ಸಿದ್ದರಾಮಯ್ಯರಿಗೆ ಅಭಿಮಾನಿಯೋರ್ವ, ಅಣ್ಣಾ ಇವತ್ತು ಹನುಮ ಜಯಂತಿ ಇದೆ ಎಂದು ನೆನಪಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ‘ ಏ ತಿನ್ಲಾ..ಹನುಮ ಹುಟ್ಟಿದ ದಿನಾಂಕ ನಿನಗೆ ಗೊತ್ತಾ..? ಗೊತ್ತಿದ್ರೆ ಆಚರಿಸು. ಇಲ್ಲಾಂದ್ರೆ ತಿನ್ನು’ ಎಂದು ಹೇಳಿದ್ದರು.
ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹನುಮ ಭಕ್ತರು ಆಕ್ರೋಶ ಒಳಗಾಗಿದ್ದಾರೆ, ಮುಂದುವರಿದು ಟಿಪ್ಪು ಜಯಂತಿ ದಿನಾಂಕ ಗೊತ್ತಿರುವ ಸಿದ್ದರಾಮಯ್ಯರಿಗೆ ಹನುಮ ಜಯಂತಿ ತಿಳಿದಿಲ್ಲವೇ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಇನ್ನು ಈ ವಿಚಾರವಾಗಿ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿರುವ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸೋಮವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.
ಈ ನೆಲದ ನಂಬಿಕೆಗಳಿಗೆ ಅವಮಾನ ಮಾಡುವುದೇ ಜಾತ್ಯಾತೀತತೆ ಎಂದು ನಂಬಿದ್ದಾರೆ ಈ ರೀತಿಯ ನಾಯಕರು. ಇವರಂತೆಯೆ ಮತ್ತೊಬ್ಬ ನಾಯಕರು ಈ ಹಿಂದೆ ಶ್ರೀ ರಾಮನ ಜನನ ಪ್ರಮಾಣ ಪತ್ರ ಎಲ್ಲಿ ಎಂದು ಕೇಳಿದ್ದು ನೆನಪಿಗೆ ಬರುತ್ತಿದೆ’ ಎಂದು ಸಿದ್ದರಾಮಯ್ಯನವರ ಹೆಸರು ಹೇಳದೇ ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

