ದೊಡ್ಡಬಳ್ಳಾಪುರ: ತಾಲೂಕಿನಲ್ಲಿ 25 ಗ್ರಾಮ ಪಂಚಾಯಿತಿಗಳ 224 ಕ್ಷೇತ್ರಗಳ 443 ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ತಾಲೂಕಿನಲ್ಲಿ ಒಟ್ಟು ಶೇ. 91.62 ಮತದಾನವಾಗಿದ್ದು, ಕಳೆದ ಗ್ರಾಮ ಪಂಚಾಯಿತಿ ಚುನಾವಣೆಗಿಂತ ಶೇ.3.9ರಷ್ಟು ಹೆಚ್ಚು ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಅಡಕವಾಗಿದೆ.
ಮತಪೆಟ್ಟಿಗೆಗಳನ್ನು ಭದ್ರತಾ ಕೊಠಡಿಯಲ್ಲಿರಿಸಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.16 ಅವಿರೋಧ ಆಯ್ಕೆಯ ಮತಗಟ್ಟೆಗಳನ್ನು ಹೊರತುಪಡಿಸಿ 233 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದೆ.
ನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಮತ ಪತ್ರಗಳ ಪೆಟ್ಟಿಗೆಗಳನ್ನು ಭದ್ರತಾ ಕೊಠಡಿಯಲ್ಲಿರಿಸಿ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು, ಡಿ.30ರಂದು ಇದೇ ಕೇಂದ್ರದಲ್ಲಿ ಬೆಳಿಗ್ಗೆ 8ರಿಂದ ಮತ ಎಣಿಕೆ ಕಾರ್ಯ ನಡೆಯಲಿದೆ.
ಏಕಕಾಲದಲ್ಲಿ ಮತ ಎಣಿಕೆ ಆರಂಭ: 25 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯ ಏಕಕಾಲಕ್ಕೆ ಆರಂಭವಾಗಲಿದ್ದು, ಒಟ್ಟು 14 ಕೊಠಡಿಗಳಲ್ಲಿ 74 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. 1 ಟೇಬಲ್‍ಗೆ ಒಬ್ಬರು ಮೇಲ್ವಿಚಾರಕರು ಹಾಗೂ ಇಬ್ಬರು ಸಹಾಯಕರು ಸೇರಿ ಮೂವರು ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಹಶಿಲ್ದಾರ್ ಟಿ.ಎಸ್.ಶಿವರಾಜ್ ಮಾಹಿತಿ ನೀಡಿದ್ದಾರೆ.
ಸೂಕ್ತ ಭದ್ರತೆ: ಮತ ಎಣಿಕೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದು, 200ಮಂದಿ ಪೊಲೀಸರು, ಎರಡು ಡಿಆರ್ ವ್ಯಾನ್ ಭದ್ರತೆಗೆ ನೇಮಿಸಲಾಗಿದೆ. ಚುನಾವಣೆ ಆಯೋಗದ ಸೂಚನೆ ಆನ್ವಯ ಮತ ಎಣಿಕೆಗೆ ಭದ್ರತೆ ಒದಗಿಸಲು ಇಲಾಖೆ ಸಿದ್ದತೆ ನಡೆಸಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

