
ಬೆಂ.ಗ್ರಾ.ಜಿಲ್ಲೆ: 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ 19 ಮತ್ತು 20ರಂದು ನಗರದ ಬಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷೆ ಪ್ರಮೀಳಾ ಮಹದೇವ ತಿಳಿಸಿದ್ದಾರೆ.
ನಗರದ ಕನ್ನಡ ಜಾಗೃತ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಹರಡದಂತೆ ಘೋಷಿಸಲಾದ ಲಾಕ್ ಡೌನ್ ಹಿನ್ನಲೆ ಮುಂದೂಡಲಾಗಿದ್ದ 2020ರಲ್ಲಿ ನಡೆಯಲು ಉದ್ದೇಶಿಸಲಾಗಿದ್ದ 22ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ ಬದಲಾವಣೆ ಮಾಡಿ, ಬಹುತೇಕ ಯಾವುದೇ ಬದಲಾವಣೆಯಿಲ್ಲದಂತೆ ನಡೆಸಲಾಗುತ್ತಿದೆ.
ಹಿರಿಯ ಕನ್ನಡ ಪರ ಹೋರಾಟಗಾರರಾದ ತ.ನ.ಪ್ರಭುದೇವ ಸಮ್ಮೇಳನ ಅಧ್ಯಕ್ಷರಾಗಿರಲಿದ್ದಾರೆ.ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಸಿದ್ದಲಿಂಗಯ್ಯ, ಚಿತ್ರ ನಟಿ ಭವ್ಯ, ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್, ಜಿಲ್ಲಾಧ್ಯಕ್ಷ ಚಿ.ಮಾ.ಸುಧಾಕರ್ ಸೇರಿದಂತೆ ಸುಮಾರು 500 ಮಂದಿ ಕನ್ನಡಪರ ಮನಸ್ಸುಗಳು ಭಾಗವಹಿಸಲಿವೆ. ದಿನಾಂಕ ಬದಲಾವಣೆ ಕುರಿತಾಗಿ ಶೇ.70ರಷ್ಟು ಮುಖಂಡರನ್ನು ಸಂಪರ್ಕಿಸಿ ಈ ಕುರಿತು ಮಾಹಿತಿ ನೀಡಲಾಗಿದ್ದು, ಎಲ್ಲರೂ ಸ್ಪಂದಿಸಿದ್ದಾರೆ ಎಂದರು.
ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಸು.ನರಸಿಂಹಮೂರ್ತಿ ಮಾತನಾಡಿ, ನಮ್ಮ ತಾಲೂಕಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪರ ಹೋರಾಟಗಾರರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸಿರುವುದು ತಾಲೂಕಿನ ಹೆಮ್ಮೆಯಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ಪ್ರತಿಷ್ಟೆಗೆ ತೆಗೆದುಕೊಳ್ಳದೆ ಹೊಮ್ಮತದಿಂದ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಬೇಕೆಂದರು.
ನಿಕಟ ಪೂರ್ವ ಜಿಲ್ಲಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಸಾಹಿತ್ಯ ಸಮ್ಮೇಳನದ ಆಯೋಜನೆಯಲ್ಲಿ ಯಾವುದೇ ಲೋಪವಾಗದಂತೆ ಕಾರ್ಯಕ್ರಮ ನಡೆಸುವ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ರಾಜೇಂದ್ರಕುಮಾರ್, ರಾಜುಸಣ್ಣಕ್ಕಿ, ವಿ.ಸಿ.ಜ್ಯೋತಿಕುಮಾರ್, ಗಂಗರಾಜ್ ಶಿರವಾರ, ನಿರ್ಮಲ, ತರಿದಾಳ್ ಶ್ರೀನಿವಾಸ್ ಇದ್ದರು.
ಕಾರ್ಯಕ್ರಮದ ವಿವರ: ಫೆ.19ರಂದು ಬೆಳಗ್ಗೆ 8ಕ್ಕೆ ಬಸವಭವನದಲ್ಲಿ ಧ್ವಜಾರೋಹಣ, 9ಗಂಟೆಗೆ ಡಾ.ರಾಜ್ ಕುಮಾರ್ ಪ್ರತಿಮೆ ಮಾಲಾರ್ಪಣೆ ಮಾಡುವ ಮೂಲಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ, 11ಗಂಟೆಗೆ ಉದ್ಘಾಟನೆ ಸಮಾರಂಭ, ಮಧ್ಯಾನ್ಹ 2ಗಂಟೆಗೆ ನಾಡು, ನುಡಿ, ಸಂಸ್ಕೃತಿ ಕುರಿತು ವಿಚಾರಗೋಷ್ಠಿ, ಸಂಜೆ 4ಗಂಟಗೆ ಕನ್ನಡ, ಮಹಿಳೆ ಮತ್ತು ಮಕ್ಕಳು ಕುರಿತು ವಿಚಾರ ಗೋಷ್ಠಿ,.6.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ.
ಫೆ.20ರಂದು ಬೆಳಗ್ಗೆ 9ಕ್ಕೆ ಕೃಷಿ, ನೀರಾವರಿ, ನೇಕಾರಿಕೆ ಕುರಿತು ವಿಚಾರಗೋಷ್ಠಿ, 11.30ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಮಧ್ಯಾಹ್ನ 1ಗಂಟೆಗೆ ಬಹಿರಂಗ ಅಧಿವೇಶನ, 1.30ಕ್ಕೆ ಕವಿ ಗೋಷ್ಠಿ, 3ಗಂಟೆಗೆ ಸನ್ಮಾನ ಸಮಾರಂಭ, ಸಂಜೆ 5ಗಂಟೆಗೆ ಸಮಾರೋಪ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮ,ಪುಸ್ತಕ ಬಿಡುಗಡೆ ನಡೆಯಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

