
ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲುಕುಂಟೆ ಬಳಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆಗೆ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ, ಕೃಷಿ ಭೂ ರಕ್ಷಣಾ ಸಮಿತಿ ನೇತೃತ್ವದಲ್ಲಿ ಹುಲಿಕುಂಟೆ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರ ಕೂಗಿದ ಪ್ರತಿಭಟನಾಕಾರರು ಭೂ ಸ್ವಾೀನ ಪಕ್ರಿಯೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಹುಲಿಕುಂಟೆ ವ್ಯಾಪ್ತಿಯ 600 ಎಕರೆ ಪ್ರದೇಶದಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ (ಎಂಎಂಎಲ್ಪಿ) ಸ್ಥಾಪನೆಯಾಗುತ್ತಿದ್ದು, ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ವ್ಯಾಪ್ತಿಯಲ್ಲಿ ಲಾಜೆಸ್ಟಿಕ್ ಗೋಡೌನ್ ನಿರ್ಮಿಸಲು ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ. ಕೃಷಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿರುವ ಕೆಎಡಿಬಿ ಇಲಾಖೆಯ ಅಧಿಕಾರಿಗಳು ಸ್ಥಳೀಯ ಸ್ಥಿತಿಗತಿಯನ್ನು ಪರಿಗಣಿಸದೆ ಇರಲು ಕಾರಣವೇನು ತಿಳಿಯುತ್ತಿಲ್ಲ. ಈ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಭೂಮಿಗೆ ಚಿನ್ನದ ಬೆಲೆ ಬರಲಿದೆ. ಆದರೆ ಸರ್ಕಾರದ ಸಂಸದರು, ಶಾಸಕರು, ಅಧಿಕಾರಿಗಳು ಈ ವ್ಯಾಪ್ತಿಯಲ್ಲಿ ಭೂಮಿ ಖರೀದಿ ಅಡ್ವಾನ್ಸ್ ನೀಡಿದ್ದಾರೆ, ಈ ಕುರಿತು ರೈತರು ಜಾಗೃತರಾಬೇಕಿದೆ. ಈ ಕುರಿತು ಕೈಗಾರಿಕಾ ಸಚಿವರೊಂದಿಗೆ ಚರ್ಚೆಗೆ ಅನುಮತಿ ಕೇಳಿದ್ದು, ಬುಧವಾರ ಸಚಿವರು ಗೈರಾದ ಹಿನ್ನೆಲೆ ಗುರುವಾರ ಸಂಜೆ ಅವಕಾಶ ನೀಡುವುದಾಗಿ ಸಭಾಪತಿ ಭರವಸೆ ನೀಡಿದ್ದಾರೆ. ತಾಲೂಕಿನಲ್ಲಿ ಇರುವ ಸುಮಾರು ನಾಲ್ಕು ನೂರು ಎಕರೆ ಖಾಲಿ ಜಮೀನಿನ ಮಾಹಿತಿ ಪಡೆದಿದ್ದು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಪ್ರದೇಶದಲ್ಲಿ ಹೈನುಗಾರಿಕೆ ಪ್ರಮುಖವಾಗಿದ್ದು, 4 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಈ ಹೋರಾಟ ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ರೈತರು ಜಾಗೃತರಾಗಬೇಕಿದ್ದು ಮುಂದೆ ಒಂದೇ ಒಂದು ಗುಂಟೆ ಸಹ ಮಾರಬಾರದು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬೇಟೆ ರಂಗನಾಥ ಸ್ವಾಮಿ ಟ್ರಸ್ಟ್‌ನ ಸೋಮಶೇಖರ್ ಮಾತನಾಡಿ, ಈ ಹಿಂದೆ ನೀಡಿರುವ ಭೂಮಿಗೆ ಇನ್ನೂ ಹಣ ಬಂದಿಲ್ಲ. ರೈತರು ಹಣದ ಆಸೆಗೆ ಒಳಗಾಗಿ ಕೃಷಿ ಭೂಮಿಯನ್ನು ವಶ ಪಡಿಸಿಕೊಳ್ಳಲು ಅವಕಾಶ ನೀಡಬಾರದೆಂದು ಮನವಿ ಮಾಡಿದರು.
ಸ್ಥಳೀಯ ಮುಖಂಡ ವಿಶ್ವನಾಥ್ ಮಾತನಾಡಿ, ಈಗಾಗಲೇ ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿ ಪರಿಸರ ಸಂಪೂರ್ಣ ಹಾಳಾಗಿ ಹೋಗಿದೆ. ಈ ನಿಟ್ಟಿನಲ್ಲಿ ನಮ್ಮ ನೆಲೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದ್ದು ರೈತರು ಒಟ್ಟಾಗಿ ಹೋರಾಟಕ್ಕೆ ಬೆಂಬಲ ನೀಡಬೇಕೆಂದರು.
ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ ರೈತರು, ಕಾರ್ಮಿಕರ ಮಕ್ಕಳಲ್ಲ: ಕನ್ನಡ ಪಕ್ಷದ ಸಂಜೀವ್ ನಾಯಕ್ ಮಾತನಾಡಿ, ದೇಶದಲ್ಲಿ ರೈತನ ಸ್ಥಿತಿ ಅದೋಗತಿ ತಲುಪಿದೆ.ರೈತನು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ವೈಜ್ಞಾನಿಕ ಬೆಲೆ, ಭೂ ಸುಧಾರಣೆ ಕಾಯ್ದೆ ಸೇರಿದಂತೆ ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ಲಕ್ಷಾಂತರ ರೈತರು ಚಳಿಗಾಳಿ, ಮಳೆಯಲ್ಲಿ ಕಳೆದ ಎರಡು ತಿಂಗಳಿಗೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸಿದರು, ಕೇಂದ್ರ ಸರ್ಕಾರ ಸಮಸ್ಯೆ ಬಗೆ ಹರಿಸಲು ಮುಂದಾಗುತ್ತಿಲ್ಲ.
ಪ್ರಧಾನಿ ಮೋದಿ, ಗೃಹಮಂತ್ರಿಗಳು ರೈತರು, ಕಾರ್ಮಿಕರ ಮಕ್ಕಳಲ್ಲ ಮಾರ್ವಾಡಿಗಳಿಗೆ ನಮ್ಮ ಕಷ್ಟ ಅರಿವಾಗುತ್ತಿಲ್ಲ. ಈ ಮುಂಚೆ ದಿವಂಗತ ಡಾ.ವೆಂಕಟರೆಡ್ಡಿ ನೇತೃತ್ವದಲ್ಲಿ ದೊಡ್ಡಬಳ್ಳಾಪುರದಲ್ಲಿ ಕೃಷಿ ಭೂಮಿಯನ್ನು ಕೈಗಾರಿಕಾ ಪ್ರದೇಶದಲ್ಲಿ ಸ್ವಾಧೀನಕ್ಕೆ ವಿರೋಧಿಸಿದರು. ಅಂದಿನ ಹೋರಾಟದ ಕಾರಣ ಈಗ ಆ ವ್ಯಾಪ್ತಿಯ ಜನರಿಗೆ ಅರಿವಾಗುತ್ತಿದೆ. ಕೈಗಾರಿಕೆ ಸ್ಥಾಪನೆಯಿಂದ ಸ್ಥಳೀಯ ಮಕ್ಕಳಿಗೆ ಉದ್ಯೋಗ ನೀಡುವುದಿಲ್ಲ,ಕೊಟ್ಟರು ಕಾರ್ಖಾನೆ ಕಾಯುವ ಕೆಲಸವಷ್ಟೆ ಎಂಬುದು ನಮ್ಮ ಕಣ್ಣ ಮುಂದೆ ಇದೆ. ಸರ್ಕಾರಗಳು ದಲ್ಲಾಳಿ ಕೆಲಸಕ್ಕೆ ಮುಂದಾಗಿ ರೈತರಿಗೆ ಗಂಡಾಂತರವಾಗಿ ಪರಿಗಣಿಸಿವೆ. ರೈತರು ಭೂಮಿಯನ್ನು ನೀಡುವುದಿಲ್ಲ ಎಂದು ಪಟ್ಟು ಹಿಡಿಯಬೇಕೆಂದರು.
ರೈತ ಸಂಘದ ಜಿಲ್ಲಾ ಮುಖಂಡ ಮುತ್ತೇಗೌಡ, ತಾಲೂಕು ಅಧ್ಯಕ್ಷ ಹನುಮೇಗೌಡ ಮಾತನಾಡಿ, ಈ ಹಿಂದೆ ರೈತರ ಹೋರಾಟದ ಫಲವಾಗಿ ಪವರ್‍ಗ್ರಿಡ್ ಕಂಪನಿಯಿಂದ ರೂ 4 ಲಕ್ಷದವರೆಗೆ ಪರಿಹಾರ ಸಿಕ್ಕಿತು. ಹೋರಾಟವಿಲ್ಲದೇ ಯಾವುದೂ ಸಿಗುವುದಿಲ್ಲ,. ಭೂ ಸ್ವಾಧೀನ ಭೂಮಿ ಸ್ವಾಧೀನಕ್ಕೆ ರೈತರು ಒಟ್ಟಾಗಿ ಹೋರಾಟ ಭೂ ಸ್ವಾಧೀನಕ್ಕೆ ವಿರೋಧ ಮಧ್ಯವರ್ತಿಗಳ ಮೂಲಕ ನಡೆಯಬಾರದು. ರೈತನೇ ಅದರ ಮುಂದಾಳತ್ವ ವಹಿಸಬೇಕಿದೆ. ಭೂಮಿ ಬೆಲೆ ಹೆಚ್ಚಿಸುವ ಹೋರಾಟಕ್ಕೆ ರೈತ ಸಂಘ ಬೆಂಬಲ ನೀಡುವುದಿಲ್ಲ. ರೈತರು ಕೈಗಾರಿಕೆ ಸ್ಥಾಪನೆಯಿಂದ ಕೊಟ್ಟ ಭೂಮಿಗೆ ಹಣ, ಮನೆಗೆ ಕೆಲಸ ಸಿಗುತ್ತೆ ಎಂಬ ಭ್ರಮೆಯಿಂದ ಹೊರ ಬರಬೇಕೆಂದರು.
ಕೊಡಿಗೇಹಳ್ಳಿಯ ಲಕ್ಷ್ಮಣ ಮಠದ ಮೋಹನ್ ರಾಂ ಸ್ವಾಮೀಜಿ ಮಾತನಾಡಿ, ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಿರುವುದು ಪ್ರಶಂಸನೀಯ. ಫಲವತ್ತಾದ ಕೃಷಿ ಭೂಮಿಯನ್ನು ಡೀಸೆಲ್ ಗ್ರೀಸ್ ಕಬ್ಬಿಣಕ್ಕೆ ನೀಡುತ್ತಿರುವ ಸರ್ಕಾರದ ನಿಲುವು ಖಂಡನೀಯ.ರೈತರ ಒಗ್ಗಟನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸುಲೋಚನಮ್ಮ ವೆಂಕಟರೆಡ್ಡಿ, ಕೃಷಿ ಭೂ ರಕ್ಷಣಾ ಸಮಿತಿ ಅಧ್ಯಕ್ಷ ಎಚ್.ಆರ್.ದೇವರಾಜ್, ಸಮಿತಿಯ ವಿಶ್ವನಾಥಯ್ಯ, ಗೋಪಿನಾಥ್, ಸೋಮಶೇಖರಯ್ಯ, ರಘು ರಂಗಸ್ವಾಮಿ, ಶಂಕರಯ್ಯ ಮೊದಲಾದವರು ಭಾಗವಹಿಸಿದ್ದರು.
ಜಿಲ್ಲಾಧಿಕಾರಿಗಳಿಗೆ ಮನವಿ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಕಾರಿ ಪಿ.ಎನ್.ರವೀಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿಗಳೊಂದಿಗೆ ಆಗಮಿಸಿದ್ದ ಕೆಐಎಡಿಬಿ ಅಧಿಕಾರಿ ಅನಿಲ್ ಕುಮಾರ್ ಅವರನ್ನು ಶಾಸಕ ಟಿ.ವೆಂಕಟರಮಣಯ್ಯ ತರಾಟೆಗೆ ತೆಗೆದುಕೊಂಡರು. ರೈತರಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಶೇ.80ರಷ್ಟು ರೈತರ ಒಪ್ಪಿಗೆ ಇರಬೇಕು. ಯೋಜನೆಯ ಕುರಿತು ಸಾರ್ವಜನಿಕವಾಗಿ ಸಭೆ ನಡೆಸಿ, ರೈತರ ಗಮನಕ್ಕೆ ತರಬೇಕು. ಇಷ್ಟು ದೊಡ್ಡ ಯೋಜನೆಯನ್ನು ನಿಯಮಾನುಸಾರ ಮಾಡದೇ ಏಕಾಏಕಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸುತ್ತಿರುವುದು ಖಂಡನೀಯ. ಮೊದಲೇ ಈ ಬಗ್ಗೆ ಸಭೆ ನಡೆಸುತ್ತಿದ್ದರೆ ರೈತರಿಂದ ಇಷ್ಟೊಂದು ಪ್ರತಿರೋಧ ಎದುರಿಸುವ ಅಗತ್ಯವಿರಲಿಲ್ಲ. ಕೂಡಲೇ ಸಂಬಂಧಪಟ್ಟವರೊಡನೆ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ರೈತರ ಮನವಿಯನ್ನು ಸಂಬಂಧಪಟ್ಟ ಸಚಿವರು ಹಾಗೂ ಕೈಗಾರಿಕಾ ಇಲಾಖೆಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಲಾಗುವುದು. ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ಸಭೆಯನ್ನು ಏರ್ಪಡಿಸಿ, ಈ ಬಗ್ಗೆ ಚರ್ಚೆ ನಡೆಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಟಿ.ಎಸ್.ಶಿವರಾಜ್, ಡಿವೈಎಸ್ಪಿ ಟಿ.ರಂಗಪ್ಪ ಮತ್ತಿತರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

