
ದೊಡ್ಡಬಳ್ಳಾಪುರ: ನಗರದ ಎಪಿಎಂಸಿ ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ಅನುಮೋದನೆಯಂತೆ ರಾಗಿ ಖರೀದಿ ಕಾರ್ಯಕ್ಕೆ ಇಂದು ಚಾಲನೆ ದೊರೆತಿದೆ. ಕಳೆದ ವರ್ಷ ನಮ್ಮ ನಗರಾಭಿವೃದ್ಧಿ ಸಚಿವರು ಹಾಗೂ ಕೃಷಿ ಸಚಿವರಾಗಿದ್ದ ಕೃಷ್ಣಬೈರೇಗೌಡರು ಚಾಲನೆ ನೀಡಿದ್ದರು, ಈ ವರ್ಷ 12 ಕೋಟಿ ರೂ ವೆಚ್ಚದಲ್ಲಿ 6 ನೂತನ ಗೋದಾಮುಗಳು ಸ್ಥಾಪನೆಯಾಗಿವೆ. ಇದರಿಂದಾಗಿ ದಾಸ್ತಾನಿಗೆ ಯಾವುದೇ ತೊಂದರೆ ಯಾಗುವುದಿಲ್ಲ. ಕಳೆದ ಸಲ ಇದ್ದ ಹಲವು ಗೊಂದಲಗಳು ಬಹುತೇಕ ಬಗೆಹರಿಸಲಾಗಿದೆ, ಪ್ರತಿ ದಿನ 3 ರಿಂದ 4 ಸಾವಿರ ಕಿಂಟಲ್ ನಷ್ಟು ರಾಗಿಯನ್ನು ಖರೀದಿಸಲಾಗುವುದು, ಭಾನುವಾರವೂ ಸಹ ರಾಗಿ ಖರೀದಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈತರು ಮಾರುವ ರಾಗಿಯನ್ನು ಸರ್ಕಾರ ಪಡಿತರ ಮೂಲಕ ಮತ್ತೆ ರೈತರ ಬಳಕೆಗೆ ನೀಡುವುದರಿಂದ ಸ್ವಚ್ಚ ಹಾಗೂ ಗುಣಮಟ್ಟ ಕಾಪಾಡುವಂತೆ ಮನವಿ ಮಾಡಿದರು.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ಕಳೆದ ವರ್ಷದಿಂದ ರಾಗಿ ಖರೀದಿ ಮಾಡುತ್ತಿದ್ದು, ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಇಲ್ಲದಂತೆ ಮಾಡಲಾಗುವುದು, ನಮ್ಮಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ರಾಗಿ ಖರೀದಿ ನೋಂದಣಿಯಾಗಿದ್ದು ನೀಲಗಿರಿ ತೆರವಿನಿಂದ ಈ ವರ್ಷ ಹೆಚ್ಚು ರಾಗಿ ಬೆಳೆದಿದ್ದಾರೆ. ಪ್ರಸ್ತುತ 7660 ರೈತರು ನೋಂದಾಣಿ ಮಾಡಿದ್ದು, 100550 ಕಿಂಟಲ್ ಖರೀದಿಸಲು ಉದ್ದೇಶಿಸಲಾಗಿದೆ. ಮಾ.15ರ ವರೆಗೆ ಖರೀದಿಗೆ ಅವಕಾಶ ನೀಡಲಾಗಿದ್ದು, ರೈತರಿಗೆ ಅಧಿಕಾರಿಗಳಿಂದ ಯಾವುದೇ ಕಿರುಕುಳ ಉಂಟಾದಲ್ಲಿ ಮುಕ್ತವಾಗಿ ದೂರು ನೀಡಬೇಕೆಂದರು.
ಇದೇ ವೇಳೆ ಶಾಸಕ ಟಿ ವೆಂಕಟರಮಣಯ್ಯ ಮತ್ತು ತಹಶೀಲ್ದಾರ್ ಶಿವರಾಜ್ ಎಪಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಕೆಟ್ಟಿರುವ ವೇ ಬ್ರಿಡ್ಜ್ ಅನ್ನು ತ್ವರಿತವಾಗಿ ರಿಪೇರಿಮಾಡಿಸುವುದು. ತೂಕ ಮತ್ತು ಅಳತೆ ಲಂಚ ಮತ್ತು ಖಾಲಿ ಚೀಲಗಳ ಖರೀದಿಯ ಬಗ್ಗೆ, ಮತ್ತು ಹಮಾಲಿ ಸೇರಿದಂತೆ ಯಾವುದೇ ಸಮಸ್ಯೆಗಳು ಕಾಣದಂತೆ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಅಧ್ಯಕ್ಷ ನಾರಾಯಣಗೌಡ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್, ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್, ಕೃಷಿಕ ಸಮಾಜದ ಅಧ್ಯಕ್ಷ ಜಯರಾಮ್, ಕಿಸಾನ್ ಕಾಂಗ್ರೆಸ್ ರಾಜ್ಯ ಮುಖಂಡರಾದ ಕುಮುದಾ, ಮುಖಂಡರಾದ ಆಂಜನಮೂರ್ತಿ, ಸೋನರುದ್ರ ಶ್ರರ್ಮ, ಮುನಿರಾಜು, ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿ ರಮೇಶ್, ಸಹಾಯಕ ಕೃಷಿ ಇಲಾಖೆ ಅಧಿಕಾರಿ ಲಿಂಗಯ್ಯ, ರಾಗಿ ಖರೀದಿ ಕೇಂದ್ರದ ಅಧಿಕಾರಿ ಪುಟ್ಟಸ್ವಾಮಿ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿರಿ.

