
ಬೆಂಗಳೂರು: ಕೋವಿಡ್-19 ತಡೆಗಟ್ಟಲು ತಡೆ ನೀಡಲಾಗಿದ್ದ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ದೇವಾಲಯಗಳು / ಸಂಸ್ಥೆಗಳಲ್ಲಿ ಸಂಪ್ರದಾಯದಂತೆ ನಡೆಸಲಾಗುತ್ತಿದ್ದ ಧಾರ್ಮಿಕ ವಿಧಿ – ವಿಧಾನಗಳು ಮತ್ತು ಪೂಜಾ ಕೈಂಕರ್ಯ ಹಾಗೂ ಇನ್ನಿತರ ಕಾರ್ಯಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದ್ದು, ಸೇವೆಗಳನ್ನು ಆರಂಭಿಸಲು ಅನುಮತಿ ನೀಡಿ ಆದೇಶ ಹೊರಡಿಸಿರುವ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕಿನ ಪ್ರಖ್ಯಾತ ಮಧುರೆ ಶ್ರಿ ಶನಿಮಹಾತ್ಮ ದೇವಾಲಯದಲ್ಲಿ ಇಂದಿನಿಂದ ಅನ್ನದಾಸೋಹ ಆರಂಭವಾಗಲಿದೆ.
ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿರುವ ದೇವಾಲಯದ ಧರ್ಮದರ್ಶಿ ಪ್ರಕಾಶ್, ಸರ್ಕಾರದ ಆದೇಶದ ಅನ್ವಯ ಇಂದಿನಿಂದ ಪೂಜಾ ಕೈಕಂಕರ್ಯಗಳನ್ನು ಆರಂಭಿಸಲಾಗುತ್ತಿದೆ. ಮಾ.22ರಂದು ಜಾತ್ರೆ ನಡೆಸಲು ಸಿದ್ದತೆ ನಡೆಸಲಾಗುತ್ತಿದ್ದು, ಇಂದಿನಿಂದ ಅನ್ನದಾಸೋಹವನ್ನು ಆರಂಭಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಸೂಚನೆಯನ್ನು ಪಾಲಿಸಲಾಗುತ್ತಿದ್ದು, ಭಕ್ತರು ಕೋವಿಡ್-19 ನಿಯಮ ಪಾಲಿಸಿ ಕ್ಷೇತ್ರದಲ್ಲಿನ ದೇವತಾ ಕಾರ್ಯಗಳಲ್ಲಿ ಭಾಗವಹಿಸಬಹುದು ಎಂದಿದ್ದಾರೆ.
ಸರ್ಕಾರದ ಆದೇಶ: ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ನೀಡಿರುವ ಆದೇಶದಂತೆ, ಫೆಬ್ರವರಿ ತಿಂಗಳಿಂದ ರಾಜ್ಯದಲ್ಲಿ ಜಾತ್ರೆ/ ಉತ್ಸವ ನಡೆಯಲಿದ್ದು, ಈ ಜಾತ್ರಾ/ ಉತ್ಸವಗಳನ್ನು ನಡೆಸಲು ಹಲವು ಬೇಡಿಕೆಗಳು ಬಂದಿರುವುದರಿಂದ, ಸಾರ್ವಜನಿಕರು / ಭಕ್ತರ ಭಾವನೆಗಳಿಗೆ ಧಕ್ಕೆ ಉಟಾಂಗುತ್ತಿರುವುದರಿಂದ, ಸೇವೆಗಳನ್ನು ಪುನರ್ ಆರಂಭಿಸಲು ಅನುಮತಿ ನೀಡಿದೆ.
ಇದರಂತೆ ಈ ಹಿಂದೆ ನಡೆಸಲಾಗುತ್ತಿದ್ದ, ಎಲ್ಲಾ ಸೇವೆಗಳು / ಜಾತ್ರಾ ಉತ್ಸವಗಳು / ಬ್ರಹ್ಮ ರಥೋತ್ಸವ / ಪವಿತ್ತ್ರೋತ್ಸವ / ಅನ್ನ ದಾಸೋಹ / ಪ್ರಸಾದ ವಿತರಣೆ / ಇತರೆ ಪೂಜಾ ಕೈಕಂಕರ್ಯಗಳನ್ನು ನಡೆಸಬಹುದಾಗಿದೆ.
ಆದಾಗ್ಯೂ ಕರೊನಾ ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹೊರಡಿಸುವ ಆದೇಶದ ಅನ್ವಯ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

