ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ನಡೆಸಿದ ಗ್ರಾಮ ವಾಸ್ತವ್ಯ ತನ್ನ ಆಶಯಗಳನ್ನು ಕಳೆದುಕೊಂಡಿದೆ. ಇದು ಅವರ ಚೊಚ್ಚಲ ಕಾರ್ಯಕ್ರಮವಾಗಿ ಉಳಿಯಿತೆ ಹೊರತು ಜನಗಳ ಕಾರ್ಯಕ್ರಮ ಆಗಲಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗಸಂದ್ರ ಪ್ರಸನ್ನ ಆರೋಪಿಸಿದರು.
ನಗರದ ಪ್ರವಾಸಿ ಮಂದಿರಲ್ಲಿ ರೈತ ಸಂಘ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಗ್ರಾಮ ವಾಸ್ತವ್ಯಕ್ಕೂ ಮುನ್ನ ರೈತರಿಗೆ ಆಗಬೇಕಿದ್ದ ಕೆಲಸಗಳ ರೂಪುರೇಷೆ ಸಿದ್ದವಾಗಬೇಕಿತ್ತು. ರಾಜ್ಯ ಮತ್ತು ಕೇಂದ್ರ ರೈತ ಕಾನೂನುಗಳ ಬಗ್ಗೆ ಸಾರ್ವಜನಿಕವಾಗಿ ತಿಳಿಸಿಕೊಡಬೇಕಿತ್ತು. ಆದರೆ ಇದ್ಯಾವುದು ಮಾಡದೆ ಗ್ರಾಮ ವಾಸ್ತವ್ಯ ಮಾಡಿರುವುದು ಅರ್ಥ ಕಳೆದುಕೊಂಡಿದೆ. ಮುಂದಿನ ದಿನಗಳಲ್ಲಾದರೂ ಸ್ಥಳೀಯ ರೈತರಿಗೆ ಕಂದಾಯ ಇಲಾಖೆಯಿಂದ ಆಗಬಹುದಾದ ಕೆಲಸಗಳ ರೂಪು ರೇಷೆ, ಕೆಲಸಗಳು ಆಗಬಹುದಾದ ಸಮಯನ್ನು ನಿಗದಿ ಮಾಡಬೇಕು ಎಂದು ಅವರು ಕಂದಾಯ ಸಚಿವರಿಗೆ ಒತ್ತಾಯಿಸಿದರು.
ರೈತರು ತಾಲೂಕು ಕಚೇರಿಗೆ ತೆರಳಿದಾಗ ಸೌಜನ್ಯದಿಂದ ನಡೆದಕೊಂಡು ಸಕಾಲಕ್ಕೆ ಅವರ ಕೆಲಸ ಮಾಡಿಕೊಟ್ಟರೆ ಸಾಕಾಗಿದೆ. ಇಂತಹ ಗ್ರಾಮ ವಾಸ್ತವ್ಯಗಳ ಆಶಯಗಳು ಈಡೇರುವಲ್ಲಿ ಇಂತಹ ಕ್ರಿಯಾತ್ಮಕ ಆಡಳಿತಕ್ಕೆ ಚಾಲನೆ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆಯಿಂದ ಶೇ.34 ರಷ್ಟು ರೈತರ ಭೂಮಿಯನ್ನು ಉದ್ಯಮಿಗಳ ಪಾಲು ಮಾಡಿರುವ ಬಿಜೆಪಿ ಸರ್ಕಾರ ಯಾರಿಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ರೈತರ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ನೀಡಿ ಗ್ರಾಮ ವಾಸ್ತವ್ಯ ಮಾಡಿದರೆ ಮಾತ್ರ ಅದರ ಆಶಯವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ರೈತ ಪರವಾಗಿ ರೈತ ಯೋಜನೆಗಳನ್ನು ತಿದ್ದುಪಡಿ ಮಾಡಿದರೆ ಮಾತ್ರ ಬದಲಾವಣೆ ಆಗಬೇಕಿರುವ ಯೋಜನೆಯನ್ನು ತಿದ್ದಿ. ಮತ್ತೆ ಬೇರೆ ಬಂಡವಾಳ ಹಾಕೊರಿಗೆ ಅವರ ಕೆಲಸ ಕಂದಾಯ ಇಲಾಖೆಯಲ್ಲಿ ಬೇಗ ಆಗುತ್ತಿದೆ. ಸ್ಥಳೀಯ ರೈತರಿಗೆ ಸಣ್ಣ ಕೆಲಸವೂ ಆಗುತ್ತಿಲ್ಲ. ಅದಕ್ಕೆ ಮೊದಲು ಅವರು ಚಾಲನೆ ನೀಡಬೇಕಿದೆ.
ಸಂಘದ ಸಂಘಟನಾ ಕಾರ್ಯದರ್ಶಿ ವಸಂತ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಂಡವಾಳ ಶಾಹಿಪರವಾದ ಕಾನೂನುಗಳನ್ನು ರೂಪಿಸುತ್ತಿವೆ, ಇದರಿಂದ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿ. ರೈತರನ್ನು ಒಕ್ಕಲೆಬ್ಬಿಸು ಹುನ್ನಾರ ನಡೆಯುತ್ತಿದೆ. ಗೋ ಹತ್ಯೆ ನಿಷೇಧ ಕಾಯ್ದೆ ನಾವು ಒಪ್ಪಿಕೊಳ್ಳಬೇಕೆಂದರೆ ಗಂಡು ಕರುಗಳನ್ನು ಸಾಕುವ ನಿರ್ವಹಣಾ ವೆಚ್ಚ ನೀಡಿ. ಇಲ್ಲವಾದಲ್ಲಿ ಮಸೂದೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಸರ್ಕಾರವನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್, ತಾಲೂಕು ಸಂಘಟನಾ ಕಾರ್ಯದರ್ಶಿ ವಸಂತ್, ತೂಬಗೆರೆ ಹೋಬಳಿ ಅಧ್ಯಕ್ಷ ವೆಂಕಟನಾರಾಯಣಪ್ಪ, ರೈತ ಮುಖಂಡರಾದ ಕಾಂತರಾಜು, ನಾರಾಯಣಸ್ವಾಮಿ, ಚೆಲುವರಾಜ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ, ಕೂ,ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….