ದೊಡ್ಡಬಳ್ಳಾಪುರ: ಕಂದಾಯ ಇಲಾಖೆಗೆ ಸಂಬಂಸಿದಂತೆ ತಾಲೂಕಿನಲ್ಲಿ ವರ್ಷಗಳಿಂದ ಬಾಕಿ ಇರುವ ಪ್ರಕರಣಗಳು ಬಹುಮಟ್ಟಿಗೆ ಕಡಿಮೆಯಾಗಿದ್ದು, ಜನಪ್ರತಿನಿಗಳು ಅಕಾರಿಗಳ ಸಹಕಾರದೊಂದಿಗೆ ಕಾಲಕಾಲಕ್ಕೆ ಇತ್ಯರ್ಥಪಡಿಸಲಾಗುತ್ತಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಕಾರೇಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಪಡಿತರ ಚೀಟಿ, ಖಾತೆ ಬದಲಾವಣೆ, ಪಹಣಿ ತಿದ್ದುಪಡಿ, ಪೋಡಿ, ಉಳುಮೆ ಚೀಟಿ, ಹಕ್ಕುಪತ್ರಗಳ ವಿತರಣೆ ಮಾಡುವ ಸಲುವಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸ ತಂದಿದೆ. ಕಳೆದ ತಿಂಗಳು ನಮ್ಮ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿ ಯಶಸ್ವಿಯಾಗಿತ್ತು ಎಂದರು.
ಇದೇ ಮಾದರಿಯಲ್ಲಿ ಅದಾಲತ್ ಕಾರ್ಯಕ್ರಮಗಳನ್ನು ಈ ಹಿಂದೆ ಹಮ್ಮಿಕೊಂಡಿದ್ದ ಫಲವಾಗಿ ತಾಲೂಕಿನಲ್ಲಿ 29 ಸಾವಿರ ಇದ್ದ ವೃದ್ದಾಪ್ಯ ವೇತನ 49 ಸಾವಿರವಾಗಿದೆ. 39 ಸಾವಿರ ಪಡಿತರ ಚೀಟಿಗಳು 79 ಸಾವಿರವಾಗಿವೆ. ವಸತಿ ಯೋಜನೆಯಡಿಯಲ್ಲಿ 32 ಸಾವಿರ ಮನೆಗಳು ಮಂಜೂರಾಗಿದೆ. ಇಂದು ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಕಾರ್ಯಕ್ರಮಕ್ಕೆ ಜನಪ್ರತಿನಿಗಳಿಂದಲೂ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಇತ್ಯರ್ಥವಾದ ಪ್ರಕರಣಗಳ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಲಾಗುತ್ತಿದ್ದು, ಸ್ಥಳದ ಪರಿಹರಿಸಲಾಗುತ್ತಿದೆ. ಕಳೆದ ತಿಂಗಳು ನಡೆದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ 688 ವಿವಿಧ ಸಾಮಾಜಿಕ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಹಾಗೂ ಕಂದಾಯ ಸಮಸ್ಯೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿತ್ತು.
ಇಂದು ನಡೆದ ಕಾರ್ಯಕ್ರಮದಲ್ಲಿ 350 ವಿವಿಧ ಸಾಮಾಜಿಕ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಮಾಡಲಾಗಿದೆ. ಇದರಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯ 14, ವೃದ್ಧಾಪ್ಯ ವೇತನ 25, ವಿಧವಾ ವೇತನ 13, ಅಂಗವಿಕಲರಿಗೆ -9, ಮನಸ್ವಿನಿ 2 ಮಂದಿಗೆ ಪಿಂಚಣಿಗಳನ್ನು ವಿತರಿಸಲಾಗಿದೆ. ಪವತಿ ಖಾತೆ- 11, ಪಹಣಿ ತಿದ್ದುಪಡಿ-10, ಆಧಾರ್ಕಾರ್ಡ್ ತಿದ್ದುಪಡಿ-243, ಎಪಿಎಲ್ ಕಾರ್ಡ್ ತಿದುಪಡಿ-9,ಪೋಡಿ ಮುಕ್ತ ಗ್ರಾಮದಡಿ 7 ಫಲಾನುಭವಿಗಳಿಗೆ ಪೋಡಿ ಮಾಡಿಕೊಡಲಾಗಿದೆ. ಸರ್ಕಾರಿ ಉದ್ದೇಶಕ್ಕೆ ವಿವಿಧ ಇಲಾಖೆಗಳಿಗೆ 3 ಜಮೀನುಗಳನ್ನು ವರ್ಗಾವಣೆ ಮಾಡಿದೆ. ಸಾಗುವಳಿ ಚೀಟಿಯನ್ವಯ 4 ಮಂದಿಗೆ ಖಾತೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್, ಇಒ ಮುರುಡಯ್ಯ, ತಾಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ, ಸಿಡಿಪಿಒ ಎಸ್.ಅನಿತಾಲಕ್ಷ್ಮೀ ಸೇರಿದಂತೆ ಕಂದಾಯ ಇಲಾಖೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

