
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪದ್ಮಶ್ರೀ ಪುರಸ್ಕೃತ ಹಾಗೂ ನಾಡೋಜ ಕೆ.ಎಸ್.ನಿಸಾರ್ ಅಹ್ಮದ್ ಅವರ ಸವಿ ನೆನಪಿನಲ್ಲಿ ನಿಸಾರ್ ಇನ್ಸಿಟ್ಯೂಟ್ ಆಫ್ ಎಜುಕೇಶನ್ ಟ್ರಸ್ಟ್ ಹಾಗೂ ಸ್ಮಾರಕ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಕಲಿಕಾರ್ಥಿ ಹಾಗೂ ವಿದ್ಯಾರ್ಥಿಗಳಿಗೂ ಸಾಹಿತ್ಯ, ಸಂಗೀತ, ನೃತ್ಯ ಕಲಿಯಲು ಈ ವಿದ್ಯಾ ಕೇಂದ್ರ ಉತ್ತಮ ವೇದಿಕೆಯಾಗಲಿದೆ ಎಂದು ಕಂದಾಯ ಇಲಾಖೆ ಸಚಿವರಾದ ಆರ್.ಅಶೋಕ್ ಅವರು ತಿಳಿಸಿದರು.

ಅವರು ತಾಲ್ಲೂಕಿನ ನಂದಿ ಹೋಬಳಿಯ ಮೊಟ್ಲೂರು ಗ್ರಾಮದಲ್ಲಿ ಸೋಮವಾರ ಪದ್ಮಶ್ರೀ, ನಾಡೋಜ ಕೆ.ಎಸ್.ನಿಸಾರ್ ಅಹ್ಮದ್ ಅವರ ಪುತ್ಥಳಿಯ ಅನಾವರಣಗೊಳಿಸಿ ಹಾಗೂ ನಿಸಾರ್ ಇನ್ಸಿಟ್ಯೂಟ್ ಆಫ್ ಎಜುಕೇಶನ್ ಟ್ರಸ್ಟ್ ಗೆ ಚಾಲನೆ ನೀಡಿ ಮಾತನಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಪರಿಸರ ಹಾಗೂ ವಾತಾವರಣ ಮಲೆನಾಡಿನ ಸೊಬಗನ್ನು ಮೀರಿಸುವಂತಿದೆ. ಇಂತಹ ಪರಿಸರದಲ್ಲಿ ನಿಸಾರ್ ಅವರ ಟ್ರಸ್ಟ್ ಮತ್ತು ಸ್ಮಾರಕ ನಿರ್ಮಿಸಿರುವುದು ಸಂತಸವಾಗಿದೆ. ರಾಜ್ಯ ಸರ್ಕಾರದಿಂದ ನಿಸಾರ್ ಅವರ ಸ್ಮಾರಕ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಸುಮಾರು 2.5 ಎಕರೆ ಜಮೀನು ಒದಗಿಸಿದ್ದೇವೆ. ಈ ಸ್ಮಾರಕದ ಮೂಲಕ ಸಂಗೀತಗಾರರಿಗೆ ಉತ್ತಮ ತರಬೇತಿ ಕೇಂದ್ರವಾಗಿ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ ಕಲಿಕಾ ಶಾಲೆಯಾಗಿ ಹಾಗೂ ಸಾಹಿತ್ಯ ಆಸಕ್ತರಿಗೆ ಉತ್ತಮ ಕಮ್ಮಟವಾಗಿ ಹೊರಹೊಮ್ಮಲಿದೆ ಎಂದರು.
ನಿಸಾರ್ ರವರು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಕನ್ನಡ ಸಾಹಿತ್ಯಕ್ಕೆ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡಕ್ಕೆ ಮತ್ತಷ್ಟು ಮೆರುಗು ತಂದ ಮಾಹನ್ ಕವಿ.ಅವರು ರಚಿಸಿರುವ “ಜೋಗದ ಸಿರಿ ಬೆಳಕಿನಲ್ಲಿ” ಹಾಡು ಎಂದಿಗೂ ಮರೆಯಲಾರೆವು. ಜಗತ್ತು ಇರುವವರೆಗೂ ಈ ಹಾಡು ಜನಪ್ರಿಯ ಆಗಿರುತ್ತದೆ. ನಿತ್ಯೋತ್ಸವ ಕವಿಯಾಗಿ ಕನ್ನಡದ ಹಾಡುಗಳನ್ನು ಬರೆದವರು ಎಂದು ತಿಳಿಸಿ ಇತ್ತೀಚಿನ ದಿನಗಳಲ್ಲಿ ರಚನೆ ಆಗುವ ಕೆಲವು ಸಿನಿಮಾ ಹಾಡುಗಳ ನೆನಪು ಬೇಗನೆ ಮಾಸಿಹೋಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ತಮ್ಮ ಜೀವನವನ್ನು ಕನ್ನಡ ಸಾಹಿತ್ಯ ಕೃಷಿಗೆ ಮುಡುಪಾಗಿಟ್ಟು, ಚಿರಸ್ಥಾಯಿಯಾಗಿ ಉಳಿಯುವಂತಹ ಕನ್ನಡದ ಕೆಲಸಗಳನ್ನು ಅವರು ಮಾಡಿದ್ದಾರೆ ಜೋಗದ ಸಿರಿ ಬೆಳಕಿನಲ್ಲಿ ಗೀತೆಗೆ ಅಂತ್ಯವಿಲ್ಲ. ಜೋಗದ ಜಲಪಾತ ಇರುವವರೆಗೂ ಹಾಡು ಜನಮಾನಸದಲ್ಲಿ ಇರುತ್ತದೆ ಈ ನಿಟ್ಟಿನಲ್ಲಿ ನಿಸಾರ್ ನೆನಪಿನ ಸ್ಮಾರಕ ಸಂಗೀತ-ನೃತ್ಯ ಹಾಗೂ ಕನ್ನಡ ಸಾಹಿತ್ಯ ಕಲಿಯುವಂತಹ ವಿದ್ಯಾ ಕೇಂದ್ರವಾಗಬೇಕು ಈ ಉದ್ದೇಶಕ್ಕೆ ಇಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸುತ್ತಿದ್ದು ಅದು ಕವಿಗಳ ತಾಣವಾಗಬೇಕು ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಮಾತನಾಡುತ್ತಾ, ಪ್ರಕೃತಿ ಸೊಬಗಿನಲ್ಲಿ ನಿಸಾರ್ ಅಮಹದ್ ಅವರ ಹೆಸರಲ್ಲಿ ಸಂಸ್ಥೆ ಸ್ಥಾಪನೆಯಾಗುತ್ತಿರುವುದು ನಮ್ಮ ಭಾಗದ ಭಾಗ್ಯ. ಕವಿಗೆ ಹಾಗೂ ಕವನಗಳಿಗೆ ಎಂದಿಗೂ ಸಾವಿಲ್ಲ. ಈ ನಿಟ್ಟಿನಲ್ಲಿ ಅವರು ರಚಿಸಿರುವ ಗೀತೆಗಳು, ಕವನಗಳ ಮೂಲಕ ನಿಸಾರ್ ಚಿರಾಯುವಾಗಿ ಅಮರರಾಗಿ ಜನಮಾನಸದಲ್ಲಿ ಇದ್ದಾರೆ ಎಂದರು.
ಅವರು ರಚಿಸಿರುವ ನಿತ್ಯೋತ್ಸವದ ಹಾಡಿನಿಂದ ಕನ್ನಡಾಂಬೆಗೆ ಹಾಗೂ ಭುವನೇಶ್ವರಿಗೆ ದಿನನಿತ್ಯದ ಉತ್ಸವ ಆಗುತ್ತಿದೆ. ಈ ಗೀತೆ ಕನ್ನಡನಾಡಿನ ನೈಸರ್ಗಿಕ ಸೌಂದರ್ಯವನ್ನು ಭೌಗೋಳಿಕ ಮಹತ್ವವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸಿಕೊಟ್ಟಿದೆ.ಅವರು ಖ್ಯಾತ ಕವಿ ಶೇಕ್ಸ್ ಪೀಯರ್ ಹಾಗೂ ಕುವೆಂಪು ಕವಿತೆಗಳನ್ನು ಇಷ್ಟಪಡುತ್ತಿದ್ದರೂ ಸಹ ಯಾವುದೇ ರೀತಿಯ ಅನುಕರಣೆ ಮಾಡದೆ ತಮ್ಮದೇ ಆದ ಶೈಲಿಯಲ್ಲಿ ಸಾಹಿತ್ಯವನ್ನು ರಚಿಸಿದ್ದಾರೆ ಇಂತಹ ಶ್ರೇಷ್ಠ ಕವಿಯ ಜೀವನಚರಿತ್ರೆಯನ್ನು ತಿಳಿದುಕೊಂಡು ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಈ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಜಮೀನು ನೀಡಿರುವಂತೆಯೇ ಈ ಶಿಕ್ಷಣ ಸಂಸ್ಥೆಯ ಕಟ್ಟಡ, ಮ್ಯೂಸಿಯಂ ನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.
ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಎನ್.ನಾಗರಾಜು ಮಾತನಾಡಿದ ಅವರು, ತಮ್ಮ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ನಿಸಾರ್ ಅಹ್ಮದ್ ಅವರು ಅಲ್ಪಸಂಖ್ಯಾತರ ವರ್ಗದಲ್ಲಿ ಜನಿಸಿ ಜಾತ್ಯಾತೀತವಾದ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡು ತಮ್ಮ ಸಾಹಿತ್ಯ ದಲ್ಲಿ ಅದನ್ನು ರಚಿಸಿ ತನ್ನದೇ ಆದ ಮಹಾನ್ ಕೊಡುಗೆಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.ಅಂತಹ ನಿತ್ಯೋತ್ಸವ ಕವಿಯಿಂದ ಸ್ಫೂರ್ತಿ ಪಡೆದ ನಾವುಗಳು ಸಂಪತ್ತು ಬಂದಾಗ ದಾನ ಮಾಡಬೇಕು, ಬಡತನ ಬಂದಾಗ ಧ್ಯಾನ ಮಾಡಬೇಕು, ಅಧಿಕಾರ ಬಂದಾಗ ಸೇವೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್, ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್, ಕಸುಸಂಪ ಅಧ್ಯಕ್ಷರಾದ ವೈ.ಕೆ.ಮುದ್ದುಕೃಷ್ಣ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ತಾಲ್ಲೂಕು ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಕೆ ಎಸ್ ನಿಸಾರ್ ಅಹಮದ್ ಅವರ ಕುಟುಂಬ ಪರಿವಾರದ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೆ.ಎಸ್.ನಿಸಾರ್ ಅಹ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಡಿನ ಗೀತಗಾಯನ ಗಮನಸೆಳೆಯಿತು. ಗಣ್ಯರೆಲ್ಲರೂ ನಿಸಾರ್ ಅಹ್ಮದ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆ ಮಾಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
