
ಬೆಂಗಳೂರು: ಆರ್ಟ್ ಆಫ್ ಲಿವಿಂಗ್, ಬದುಕಿನ ಕ್ಲಿಷ್ಟವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಅರ್ಥೈಸಿಕೊಳ್ಳುವ ಒಂದು ಆಧ್ಯಾತ್ಮಿಕ ಕೇಂದ್ರ. ಜೀವನದ ಅರ್ಥವನ್ನು ಸರಳ ರೀತಿಯಲ್ಲಿ ಕಂಡುಕೊಳ್ಳುವ ವಿಧಾನ ಪದ್ಧತಿಗಳನ್ನು ತಿಳಿಯಲು ಈ ಕೇಂದ್ರಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಬುಧವಾರ ರಾತ್ರಿ ಆರ್ಟ್ ಆಫ್ ಲಿವಿಂಗ್ ಸೆಂಟರ್ ನಲ್ಲಿ ಏರ್ಪಡಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀ ರವಿಶಂಕರ್ ಗುರೂಜಿ ಅವರನ್ನು ಭೇಟಿಯಾಗುವುದು ನನ್ನ ಪಾಲಿಗೆ ಅಮೃತ ಘಳಿಗೆ. ಜಗತ್ತಿನಲ್ಲಿ ಮಾನವ ಜನ್ಮ ಅತ್ಯಂತ ಶ್ರೇಷ್ಠವಾದುದು. ಮಾನವನಿಗೆ ಒಗ್ಗಿಕೊಳ್ಳುವಿಕೆಯ ಮಹತ್ವದ ಗುಣವನ್ನು ಹೊಂದಿದ್ದಾನೆ.ಯಾವುದೇ ಭೌಗೋಳಿಕ ಪರಿಸ್ಥಿತಿಯಲ್ಲಿಯೂ ಮನುಷ್ಯ ಜೀವಿಸಬಲ್ಲ. ಗುಣಮಟ್ಟದ ಜೀವನ ನಡೆಸಲು ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಬರಬೇಕು. ಕೆಲವೇ ಮನುಷ್ಯರು ನಿಸ್ವಾರ್ಥ ಸೇವೆ ಮಾಡಿ ಯುಗಪುರುಷರಾಗುತ್ತಾರೆ. ಅವರಲ್ಲಿ ಒಬ್ಬ ಶ್ರೇಷ್ಟ ಗುರು ಶ್ರೀ ರವಿಶಂಕರ್ ಗುರೂಜಿ.
ನಮ್ಮಲ್ಲಿ ಚರಿತ್ರೆ ಇದೆ, ಚಾರಿತ್ರ್ಯ ಬೇಕಿದೆ: ನಮ್ಮ ಸನಾತನ ಧರ್ಮಕ್ಕೆ 5 ಸಾವಿರಗಳ ಇತಿಹಾಸವಿದೆ. ನಮ್ಮಲ್ಲಿ ಚರಿತ್ರೆ ಇದೆ, ಚಾರಿತ್ರ್ಯ ಬೇಕಿದೆ. ಸುಲಭ ರೀತಿಯಲ್ಲಿ ಜೀವನದ ಸಾಕ್ಷಾತ್ಕಾರ ಪಡೆಯಲು ಹಾಗೂ ಜೀವನವನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗಲು ಈ ಕೇಂದ್ರಕ್ಕೆ ಬರಲೇಬೇಕು. ವಿಶ್ವದ ಸುಮಾರು 140 ದೇಶದ ಜನರ ಸಮಾಗಮವನ್ನು ಈ ಆಧ್ಯಾತ್ಮಿಕ ಕೇಂದ್ರದಲ್ಲಿ ಕಾಣಬಹುದಾಗಿದೆ ಎಂದರು. ನಾಗರಿಕತೆ ಮತ್ತು ಸಂಸ್ಕೃತಿ ನಡುವೆ ಬಹಳ ವ್ಯತ್ಯಾಸವಿದೆ. ನಮ್ಮಲ್ಲಿರುವುದು ನಾಗರಿಕತೆ, ನಾವೇನಾಗಿದ್ದೇನೆ ಎನ್ನುವುದು ಸಂಸ್ಕೃತಿ. ನಾವೇನಾಗಿದ್ದೇವೆ ಎಂದು ಅರಿಯಲು ಆರ್ಟ್ ಆಫ್ ಲಿವಿಂಗ್ ಗೆ ಬರಬೇಕು ಎಂದರು.
ವಿಜ್ಞಾನ, ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು: ವಿಜ್ಞಾನ ಮತ್ತು ಆಧ್ಯಾತ್ಮ,ಒಂದೇ ನಾಣ್ಯದ ಎರಡು ಮುಖಗಳು. ಆಧ್ಯಾತ್ಮಿಕತೆ ವಿಜ್ಞಾನಕ್ಕೆ ಪ್ರೇರಣೆ ನೀಡಿದರೆ, ವಿಜ್ಞಾನ ಆಧ್ಯಾತ್ಮಿಕತೆಯನ್ನು ನಿರೂಪಿಸುತ್ತದೆ. ವಿಜ್ಞಾನ ಮತ್ತು ಆತ್ಮಜ್ಞಾನವನ್ನು ಅರಿತುಕೊಳ್ಳುವುದು ಒಂದು ಕಲೆ. ಈ ಕಲೆಯನ್ನು ಜನರಿಗೆ ಸುಲಭವಾಗಿ ಅರಿವು ಮೂಡಿಸಲು ಈ ಕೇಂದ್ರಕ್ಕೆ ಆರ್ಟ್ ಆಫ ಲಿವಿಂಗ್ ಎಂದು ಹೆಸರಿಟ್ಟಿರಬಹುದು. ಜೀವನದ ಸರ್ವಕಾಲಿಕ ಸತ್ಯಗಳ ಜ್ಞಾನವನ್ನು ಪಡೆಯಬಹುದು. ಈ ಸರ್ವಕಾಲಿಕ, ವಿಶ್ವವ್ಯಾಪಿ ಸತ್ಯಗಳಿಗೆ ಯಾವುದೇ ಭಾಷೆ, ದೇಶದ ಬೇಧವಿಲ್ಲ. ವಿಶ್ವವ್ಯಾಪಿಯಾಗಿ ಭಕ್ತರು ಈ ಸತ್ಯವನ್ನು ಅರಿಯಬಹುದಾಗಿದೆ. ಭಕ್ತಿ ಎಂದರೆ ಕರಾರುರಹಿತ ಪ್ರೀತಿ.
ಗುರುವಿನಲ್ಲಿ ಭಕ್ತಿಯಿಂದ ಲೀನವಾಗುವುದರಿಂದ ಜೀವನದ ಅರ್ಥಗಳನ್ನು ತಿಳಿಯಬಹುದು. ಹಣಕಾಸಿನ ಆರ್ಥಿಕತೆಯಲ್ಲಿ ಪಾಪಪುಣ್ಯವನ್ನು ಹಾಗೂ ಆಧ್ಯಾತ್ಮದಲ್ಲಿ ಲಾಭನಷ್ಟವನ್ನು ನೋಡುತ್ತೇನೆ. ಇಡೀ ಜಗತ್ತಿನಾದ್ಯಂತ ಬದುಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜೀವನೋತ್ಸಾಹವಿರುವ ಕೇಂದ್ರದಿಂದ ಇಡೀ ವಿಶ್ವಕ್ಕೆ ಒಳಿತಾಗುತ್ತಿದೆ. ಶ್ರೀಗುರುಗಳು, ಜೀವನದ ಕತ್ತಲನ್ನು ಸರಿಸಿ ಬೆಳಕನ್ನು ತರುವ ಕೆಲಸವನ್ನು ದಿನನಿತ್ಯ ಮಾಡುತ್ತಿದ್ದಾರೆ ಎಂದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕನ್ನಡದ ಎಲಿಮೆಂಟ್ ಆ್ಯಪ್ ಅನ್ನು ಉದ್ಘಾಟಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
