ಒಂದು ಪಟ್ಟಣದಲ್ಲಿ ನಿತ್ಯಾನಂದ ಗುಪ್ತ ಎಂಬುವನು ತನ್ನ ಪತ್ನಿ ಗೋಮತಿ ಜೊತೆ ವಾಸಿಸುತ್ತಿದ್ದನು. ಬಹಳ ದೊಡ್ಡ ವ್ಯಾಪಾರಿ, ಬೇಕಾದಷ್ಟು ಸಂಪಾದನೆ ಇದೆ. ನಿತ್ಯಾನಂದ ಪತ್ನಿ ಗೋಮತಿ, ಒಳ್ಳೆಯ ಸಾಧ್ವಿಮಣಿ, ಯಾರೇ ಬಂದು ಕೇಳಿದರೆ ಇಲ್ಲ ಎನ್ನದೆ ಇರುವುದನ್ನು ಸಂತೋಷವಾಗಿ ಕೊಡುತ್ತಿದ್ದಳು.
ನಿತ್ಯಾನಂದ ಮನೆಯಲ್ಲಿದ್ದರೆ ಕೊಡಬೇಡ ಎನ್ನುತ್ತಿದ್ದನೊ ಏನೋ? ಆದರೆ ವ್ಯವಹಾರಕ್ಕೆ ಹೊರಗೆ ಹೆಚ್ಚು ಇರುವುದರಿಂದ, ಪತ್ನಿ ಕೊಡುವುದನ್ನು ಅವನೆಂದು ಕೇಳಿರಲಿಲ್ಲ. ನಿತ್ಯಾನಂದ ವಿಷ್ಣುವಿನ ಪರಮ ಭಕ್ತನಾಗಿದ್ದನು. ನಿತ್ಯವು ಲಕ್ಷ್ಮೀ ನಾರಾಯಣರ ದೇವಸ್ಥಾನಕ್ಕೆ ಹೋಗುತ್ತಿದ್ದ. ಪೂಜೆ ಮಂಗಳಾ ರತಿ ಮಾಡಿಸುತ್ತಿದ್ದ, ಭಜನೆ ಮಾಡುತ್ತಿದ್ದ.
ದೇವಸ್ಥಾನದ ವಿಶೇಷ ಪೂಜಾ ಕಾರ್ಯಗಳಲ್ಲಿ ತಾನು ಭಾಗಿಯಾಗುತ್ತಿದ್ದ. ಮನೆಯಲ್ಲಿ ಲಕ್ಷ್ಮೀನಾರಾಯಣ ವಿಗ್ರಹ ಇಟ್ಟುಕೊಂಡು, ನಿತ್ಯವೂ ಹೂವಿನ ಅಲಂಕಾರ, ಸ್ತೋತ್ರ ಪಠನೆ, ಪೂಜೆ ನಂತರ ಬಗೆ ಬಗೆಯ ನೈವೇದ್ಯ ತೋರಿಸಿ, ಮಂಗಳಾರತಿ ಮಾಡುತ್ತಿದ್ದ. ಆದರೆ ಇವನು ಕಂಜೂಸ್ ಆಗಿದ್ದ ಕಾರಣ ಯಾರಿಗೂ ದಾನ ಮಾಡುತ್ತಿರಲಿಲ್ಲ.
ಹೀಗಿರುವಾಗ ಒಂದು ದಿನ ನಿತ್ಯಾನಂದನು ಮನೆಯಲ್ಲೆ ಇದ್ದನು. ಆ ಹೊತ್ತಿಗೆ ಒಬ್ಬ ಬಡವ, ಮನೆ ಮುಂದೆ ಬಂದು ಮೂರು ದಿನದಿಂದ ಆಹಾರವಿಲ್ಲ ಸ್ವಲ್ಪ ತಿನ್ನಲು ಕೊಡಿ ಎಂದು ಬೇಡಲು ಬಂದಿದ್ದನು. ಗೋಮತಿ ಅವನನ್ನು ನಿಲ್ಲಲು ಹೇಳಿ ಅವನಿಗಾಗಿ ತಿಂಡಿ, ಸ್ವಲ್ಪ ಅಡುಗೆಯನ್ನು ಬಡಿಸಿಕೊಂಡು ಕೊಡಲು ಹೊರಟಳು. ಇದನ್ನು ನೋಡುತ್ತಿದ್ದ ನಿತ್ಯಾನಂದನು, ಪತ್ನಿಗೆ ನೀನು ಯಾರಿಗೂ ದಾನ ಕೊಡಬಾರದು, ಅವನು ಅಷ್ಟು ಗಟ್ಟಿಮುಟ್ಟಾಗಿದ್ದಾನೆ ದುಡಿದು ತಿನ್ನಲಿ, ಹೀಗೆ ಕೈ ಕಾಲು ಗಟ್ಟಿ ಇದ್ದವರಿಗೆ ನಾವು ದಾನ ಮಾಡುತ್ತಾ ಹೋದರೆ ಕೂಡಿಟ್ಟ ನಮ್ಮ ಸಂಪತ್ತೆಲ್ಲ ಕರಗಿ ಹೋಗುತ್ತದೆ. ನಾವು ಕಷ್ಟಪಟ್ಟು ದುಡಿದಿರುವುದನ್ನು
ಬಂದವರಿಗೆಲ್ಲ ಕೊಟ್ಟರೆ, ಕೈಕಾಲಲ್ಲಿ ಶಕ್ತಿ ಇರುವವರು ಬೇಡಿ ತಿಂದು ಸೋಮಾರಿಗಳಾಗುತ್ತಾರೆ ಕೊಡಬಾರದು ಎಂದನು. ಇದನ್ನು ಕೇಳಿಸಿಕೊಂಡ ಆ ಭಿಕ್ಷುಕ ಹಾಗೆ ಹೋದನು.
ಬೇಜಾರಾದ ಗೋಮತಿ, ಹೋಗಲಿ ಬಿಡಿ ಅವನೇನು ಸಂಪತ್ತು ಕೇಳಿದನೇ? ಏನೋ ಸ್ವಲ್ಪ ಆಹಾರ ಕೇಳಿದ. ಹಸಿದವರಿಗೆ ಆಹಾರ ಕೊಡುವುದು ನಮ್ಮ ಧರ್ಮ. ನಮಗಾದರೂ ಬೇಕಾದಷ್ಟು ಸಂಪತ್ತು ಇದೆ ಒಂದು ಹಿಡಿ ಅನ್ನವನ್ನು ಕೊಟ್ಟ ಮಾತ್ರಕ್ಕೆ ನಮ್ಮ ಸಂಪತ್ತು ಕರಗಿ ಹೋಗುವುದಿಲ್ಲ. ಮನುಷ್ಯ ಮನುಷ್ಯ ನಿಗೆ ಸಹಾಯ ಮಾಡಬೇಕು. ಇಲ್ಲದಿದ್ದರೆ ಭಗವಂತನು ಮೆಚ್ಚುವುದಿಲ್ಲ ಎಂದಳು.
ನಿತ್ಯಾನಂದನು, ಹೌದೌದು ನಿನ್ನ ಮಾತು ಕೇಳಿ ಬದುಕಿದ್ದರೆ, ನಾವು ಎರಡು ಹೊತ್ತಿನ ಊಟಕ್ಕೂ ಒದ್ದಾಡಬೇಕಾಗುತ್ತೆ. ನಿನಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲ ಎಂದನು. ಹೆಂಡತಿ ಏನು ಹೇಳದೆ ಸುಮ್ಮನಾದಳು.
ಮರುದಿನ ಬೆಳಗ್ಗೆ ಮತ್ತೊಬ್ಬ ಭಿಕ್ಷುಕ ಬಂದನು. ಮನೆಯಲ್ಲಿಯೇ ಇದ್ದ ನಿತ್ಯಾನಂದ ಅವನೇ ಮುಂದೆ ಬಂದು ಆ ಭಿಕ್ಷುಕನಿಗೆ ಏನೂ ಕೊಡುವುದಿಲ್ಲ ಎಂದು ಹಾಗೆ ಕಳುಹಿಸಿದ. ಮತ್ತೊಂದು ದಿನ ಮುದುಕಿ ಬೇಡಲು ಬಂದಳು ಆಗ ಅವನು ಇರಲಿಲ್ಲ. ಗೋಮತಿ ಆ ಬಡವಿಗೆ ಆಹಾರ, ಸೀರೆ, ಸ್ವಲ್ಪ ಹಣ ಕೊಟ್ಟು ಕಳಿಸಿದಳು.
ಹೀಗಿರುವಾಗ, ಒಂದು ದಿನ ಕೆಲಸದ ನಿಮಿತ್ತ ನಿತ್ಯಾನಂದನು ಪಕ್ಕದ ಗ್ರಾಮಕ್ಕೆ ಒಂದು ಗಾಡಿಯಲ್ಲಿ ಹೊರಟನು. ಗಾಡಿಯಲ್ಲಿ ಅವನೊಬ್ಬನೇ ಇದ್ದನು. ಅಲ್ಲೊಬ್ಬ ವ್ಯಕ್ತಿ ಓಡಿ ಬಂದು, ಸ್ವಾಮಿ ನಾನು ಬೇಡಲು ಬಂದ ಬಿಕಾರಿಯಲ್ಲ. ನನಗೆ ಬೇಕಾದಷ್ಟು ಸಂಪತ್ತು ಇದೆ. ಈ ದಿನ ನಾನು ತಂದ ಹಣವನ್ನು ಕಳ್ಳರು ಅಪಹರಿಸಿದರು. ನನ್ನ ಗ್ರಾಮವು ಬಹಳ ದೂರದಲ್ಲಿದೆ ನಡೆದು ಹೋಗಲು ಆಗುವುದಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ. ನಿಮ್ಮ ಜೊತೆಗಾಡಿಯಲ್ಲಿ ನಾನೂ ಬರುತ್ತೇನೆ. ನಿಮ್ಮ ಉಪಕಾರಕ್ಕೆ ನಾನು ಕೃತಜ್ಞನಾಗಿರುತ್ತೇನೆ. ನನ್ನ ಮನೆ ಬಂದ ಕೂಡಲೇ ಗಾಡಿಯ ಬಾಡಿಗೆಯನ್ನು ಕೊಡುತ್ತೇನೆ ಎಂದನು.
ನಿತ್ಯಾನಂದ, ಅವನನ್ನೇ ನೋಡುತ್ತಾ, ಓಹೋ ಭಿಕ್ಷೆ ಬೇಡಲು ಇದೊಂದು ಹೊಸ ನಾಟಕವೇ? ನೀವೆಲ್ಲಾ ಎಂತೆಂಥ ಚಾಲಾಕಿ ಮನುಷ್ಯರು, ಮೈಮುರಿದು ದುಡಿದು ತಿನ್ನಲು ನೀವೆಲ್ಲ ಸೋಮಾರಿಗಳು. ನಡಿಯಾಚಿ, ಸಹಾಯ ಅಂತೆ ಸಹಾಯ, ನಾನು ಸಹಾಯ ಮಾಡಲ್ಲ. ನಿನ್ನಂಥ ಎಷ್ಟೋ ಜನ ಭಿಕಾರಿಗಳನ್ನು ನೋಡಿದ್ದೇನೆ. ಗಾಡಿಯವನಿಗೆ ಮುಂದೆ ಓಡಿಸು ಎಂದನು. ಆ ಗ್ರಾಮದಲ್ಲಿ
ಇಳಿದ ಮೇಲೆ, ಹಾದಿ ಬೀದಿಯಲ್ಲಿರುವ ಭಿಕ್ಷುಕರು ಬೇಡಲು ಬಂದರೆ ಅವರಿಗೆ ಏನನ್ನು ಕೊಡದೆ ಬೈದು ಮುಂದೆ ಹೋಗುತ್ತಿದ್ದನು.
ಇದನ್ನೆಲ್ಲ ದೇವಲೋಕದಲ್ಲಿ ನಾರಾಯಣನ ಜೊತೆ ಕುಳಿತು ನೋಡುತ್ತಿದ್ದ ಲಕ್ಷ್ಮಿಯು, ನಾರಾಯಣನಿಗೆ ಸ್ವಾಮಿ, ನಿತ್ಯಾನಂದನನ್ನು ನೋಡಿದಿರಾ? ಅಷ್ಟು ಸಂಪತ್ತು ಇದ್ದರೂ ಒಬ್ಬರಿಗೂ ಬಿಡಿಗಾಸು ಕೊಡುವುದಿಲ್ಲ, ತಿನ್ನಲು ಆಹಾರ ಕೊಡುವುದಿಲ್ಲ, ಹೋಗಲಿ ಕೇಳಿದವರಿಗೆ ಸಹಾಯವನ್ನು ಮಾಡುವುದಿಲ್ಲ, ಇವನೆಂತ ಮೂರ್ಖ ಮನುಷ್ಯ ಎಂದಳು. ಅದಕ್ಕೆ ವಿಷ್ಣು, ದೇವಿ ಅದು ನನಗೂ ಗೊತ್ತು. ಇದನ್ನೆ ಕುರಿತು ನಾನು ಯೋಚಿಸುತ್ತೇನೆ. ಏಕೆಂದರೆ ಅವನು ನನ್ನ ಮಹಾ ದೊಡ್ಡ ಭಕ್ತ. ಆದರೆ ಅವನ ಮನಸ್ಸು ತುಂಬಾ ಚಿಕ್ಕದು. ಇದನ್ನು ಕೇಳಿದ ಲಕ್ಷ್ಮಿ, ಹಾಗಾದರೆ ಸ್ವಾಮಿ ಅವನನ್ನು ನೀವು ಉದ್ಧಾರ ಮಾಡಿರಿ ಎಂದಳು.
ಯೋಚಿಸಿದ ವಿಷ್ಣು, ಒಂದು ರಾತ್ರಿ ನಿತ್ಯಾನಂದ ಗಾಢವಾದ ನಿದ್ದೆಯಲ್ಲಿದ್ದಾಗ ಅವನಿಗೆ ಕನಸು ಕಂಡಿತು. ಅದರಲ್ಲಿ ನಾರಾಯಣನು ದರ್ಶನ ಕೊಟ್ಟು , ನಿತ್ಯಾನಂದ ನೀನು ನನ್ನ ಪರಮ ಭಕ್ತನೇನು ಸರಿ, ಆದರೆ ನೀನೇಕೆ ಆಹಾರವಾಗಲಿ ಹಣವಾಗಲಿ ದಾನ ಮಾಡುವುದಿಲ್ಲ. ನಿನ್ನ ಗಮನವೆಲ್ಲ ಸಂಪಾದನೆಯ ಮೇಲೆ ಇದೆ. ನಿತ್ಯಾನಂದನು ಕ್ಷಮಿಸಿ ಪ್ರಭು, ನೀವು ಹೇಳಿ ದಂತೆ ನನ್ನ ಗಮನವೆಲ್ಲ ಸಂಪಾದನೆಯ ಮೇಲೆ ನೆಟ್ಟಿದೆ. ಇನ್ನು ಮುಂದೆ ನೀವು ಹೇಳಿದಂತೆ ದಾನ ಮಾಡುತ್ತೇನೆ ಎಂದನು.
ವಿಷ್ಣುವಿಗೆ ಸಂತೋಷವಾಯಿತು, ನಾರಾಯಣನು ಹೀಗೆ ಹೇಳಿದನು, ನಿತ್ಯಾನಂದ ನಾಳೆ ಬೆಳಿಗ್ಗೆ ನೀನು ಒಬ್ಬ ಬ್ರಾಹ್ಮಣ ದಂಪತಿಯನ್ನು ಹುಡುಕಿ ಮನೆಗೆ ಕರೆತಂದು, ಅವರಿಗೆ ಹೊಟ್ಟೆ ತುಂಬಾ ಬಡಿಸಿ ಸಂತೋಷ ಪಡಿಸಬೇಕು. ನಿನಗೆ ತೃಪ್ತಿಯಾಗದಿದ್ದರೆ ಅವರ ಜೊಳಿಗೆಯಲ್ಲಿ ತುಂಬುವಷ್ಟು ದವಸ ಧಾನ್ಯ ಹಣ ಏನು ಬೇಕಾದರೂ ಹಾಕಿ ತುಂಬಿಸಿ ಬಿಡು. ಇದರಿಂದ ನಿನಗೆ ತುಂಬಾ ಒಳ್ಳೆಯದಾಗುತ್ತದೆ ಎಂದು ಅಂತರ್ದಾನನಾದನು.
ಕನಸಿನಿಂದ ಎಚ್ಚೆತ್ತ ನಿತ್ಯಾನಂದ, ಪತ್ನಿಯನ್ನು ಎಬ್ಬಿಸಿ ಕನಸಿನ ವಿಚಾರವನ್ನು ಹೇಳಿದ. ಮರುದಿನ ಗಂಡ ಹೆಂಡತಿ ಬೇಗ ಎದ್ದು ದೇವರ ಪೂಜೆಯನ್ನು ಮಾಡಿ,
ಬ್ರಾಹ್ಮಣ ದಂಪತಿಯನ್ನು ಕರೆತರಲು ಹುಡುಕಲು ಹೊರಟರು, ಅದೇನೋ, ಎಷ್ಟೇ ಅಲೆದರು ಅವರಿಗೆ ಬ್ರಾಹ್ಮಣ ದಂಪತಿ ಸಿಗಲಿಲ್ಲ. ಸುಸ್ತಾಗಿ ಮನೆಗೆ ಬಂದರು. ಎಲ್ಲಿ ಹುಡುಕಿ ತರೋಣ ಬ್ರಾಹ್ಮಣ ದಂಪತಿಯನ್ನು ಎಂದು ಚಿಂತಿಸುತ್ತಾ ಕುಳಿತಿರುವಾಗ. ಹೊರಗಿನ ಬಾಗಿಲಿಂದ ಒಂದು ಧ್ವನಿ ಕೇಳಿಸಿತು.
ಬ್ರಾಹ್ಮಣ ಗಂಡ ಹೆಂಡತಿ ಬಾಗಿಲಲ್ಲಿ ನಿಂತಿದ್ದು, ನಾವು ಬಹಳ ದೂರದಿಂದ ಬಂದಿದ್ದೇವೆ ನಿನ್ನೆಯಿಂದ ಆಹಾರ ತಿಂದಿಲ್ಲ ಬಹಳ ಹಸಿದಿದ್ದೇವೆ. ದಯವಿಟ್ಟು
ಏನಾದರೂ ಸ್ವಲ್ಪ ಭೋಜನವನ್ನು ಕೊಡಿ ಎಂದು ಕೇಳಿದರು. ನಿತ್ಯಾನಂದ ಸಂತೋಷದಿಂದ ಎದ್ದು ಬಂದು, ತಾವು ಬ್ರಾಹ್ಮಣರೇ ಎಂದು ಕೇಳಿದನು. ಹೌದು ಸ್ವಾಮಿ ಬಡ ಬ್ರಾಹ್ಮಣ ಎಂದನು.
ಬಹಳ ಬಳಲಿದ್ದೀರಿ ಬನ್ನಿ ಒಳಗೆ ನಿಮಗಾಗಿ ಬಿಸಿ ಭೋಜನ ಕೊಡುತ್ತೇವೆ ಎಂದು ಒಳಗೆ ಕರೆದು ಕೂರಿಸಿ, ಕುಡಿಯಲು ನೀರು ಕೊಟ್ಟು ಉಪಚರಿಸಿದನು. ಗೋಮತಿ ಬಿಸಿಬಿಸಿಯಾದ ಪೂರಿ ಪಲ್ಯ ಅನ್ನ ,ಸಾರು , ಬಡಿಸಿದಳು ಬ್ರಾಹ್ಮಣ ದಂಪತಿ ನಿಧಾನವಾಗಿ ಒಂದೊಂದೇ ತಿನ್ನುತ್ತ ಅಡಿಗೆ ಮನೆಯಲ್ಲಿದ್ದ ಎಲ್ಲಾ ಅಡುಗೆ ಪದಾರ್ಥವನ್ನು ಬಿಡದಂತೆ ಹಾಕಿದ್ದೆಲ್ಲ ಖಾಲಿ ಮಾಡಿದರು. ಇನ್ನು ಬಡಿಸಲು ಏನೂ ಇರಲಿಲ್ಲ…!
ನಿತ್ಯಾನಂದನಿಗೆ ಬೇಸರವಾಯಿತು. ದೇವರ ಮುಂದೆ ನಿಂತು ಹೇ ಭಗವಾನ್ ವಿಷ್ಣು, ನಾನು ಬ್ರಾಹ್ಮಣ ದಂಪತಿಗೆ ಹೊಟ್ಟೆ ತುಂಬಾ ಬಡಿಸಲಾಗಲಿಲ್ಲ ಮಾಡಿದ ಅಡುಗೆ ಎಲ್ಲ ಖಾಲಿಯಾಯಿತು ಈಗ ಏನು ಮಾಡಲಿ ಎಂದು ಬೇಡಿದನು.
ಆಗ ಊಟಕ್ಕೆ ಕುಳಿತಿದ್ದ ಬ್ರಾಹ್ಮಣ ನಿತ್ಯಾನಂದ ನೀನು ಬೇಜಾರು ಮಾಡಿಕೊಳ್ಳಬೇಡ, ನೀವಿಬ್ಬರೂ ಪ್ರೀತಿಯಿಂದ ಬಡಿಸಿದರಿ ಅದೇ ನಮಗೆ ತೃಪ್ತಿಯಾಗಿದೆ ಸಾಕು ಎಂದನು. ಆದರೆ ನಿತ್ಯಾ ನಂದನೆಗೆ ಸಮಾಧಾನವಾಗಲಿಲ್ಲ. ಆಗ ಕನಸಿನಲ್ಲಿ ವಿಷ್ಣು ಹೇಳಿದ್ದು ನೆನಪಾಯಿತು. ನಿನಗೆ ತೃಪ್ತಿಯಾಗುವಷ್ಟು ಬ್ರಾಹ್ಮಣನು ತಂದ ಜೋಳಿಗೆ ತುಂಬಿಸಿ ಬಿಡು, ಇದರಿಂದ ನಿನಗೆ ಒಳ್ಳೆಯದಾಗುತ್ತದೆ ಎಂದಿದ್ದು ನೆನಪಾಯಿತು.
ಮನೆಯಲ್ಲಿದ್ದ ದವಸ ಧಾನ್ಯ ಆತನು ತಿಜೋರಿಯಿಂದ ಕಂತೆ ಕಂತೆ ಹಣದ ಕಟ್ಟುಗಳನ್ನೇ ತಂದು ಬ್ರಾಹ್ಮಣನ ಜೋಳಿಗೆಗೆ ಹಾಕಿದನು. ಅದು ಸಣ್ಣ ಜೋಳಿಗೆ ಆದರೂ ತುಂಬಲಿಲ್ಲ. ನಿತ್ಯಾನಂದ ಪತ್ನಿಯನ್ನು ಇನ್ನೇನು ಕೊಡಲಿ ಎಂದು ಕೇಳಿದ.
ಒಳ್ಳೆಯ ಬಟ್ಟೆಗಳನ್ನೆಲ್ಲ ತಂದು ಹಾಕಿದಳು. ಆದರೂ ತುಂಬಲಿಲ್ಲ. ಮತ್ತಷ್ಟು ತುಂಬಿದ ಹಣವನ್ನೆಲ್ಲ ತಂದು ಹಾಕಿದರು. ಅದು ಆಭರಣಗಳು, ಬೆಳ್ಳಿ ಪಾತ್ರೆಗಳು, ಅಡುಗೆ ಮನೆಯ ಬಳಸುವ ಪಾತ್ರೆಗಳು, ಬೆಲೆ ಬಾಳುವ ಎಲ್ಲವನ್ನು ತಂದು ಹಾಕಿದರೂ ಜೋಳಿಗೆ ತುಂಬಲಿಲ್ಲ.
ಗೋಮತಿ ಏನು ಮಾಡಲಿ ತಿಜೋರಿಯೆಲ್ಲ ಖಾಲಿಯಾಯಿತು ಆದರೂ ತುಂಬಲಿಲ್ಲ ಎಂದನು. ಮನೆಯಲ್ಲಿದ್ದ ಬೀರು ಪೆಟಾರಿ, ಬೆಂಚು, ಕುರ್ಚಿ, ಹಾಕಿದರು ಜೋಳಿಗೆ ತುಂಬಲಿಲ್ಲ. ಮತ್ತೆ ಪತ್ನಿಯನ್ನು ಏನು ಮಾಡಲಿ ಗೋಮತಿ ಇನ್ನೇನು ಇದೆ ಎಂದನು. ಆಕೆ ನಮ್ಮ ಬಳಿ ಇನ್ನು ಏನು ಇಲ್ಲ. ಆದರೆ ನಮ್ಮದು ಎನ್ನುವ ಈ ಮನೆ ಇದೆ ಇದನ್ನು ಕೊಟ್ಟುಬಿಡೋಣ ಎಂದಳು.
ನಿತ್ಯಾನಂದನು ಅದೇ ಸರಿ ಎಂದು ಬ್ರಾಹ್ಮಣನಿಗೆ ತನ್ನ ಮನೆಯ ಕಾಗದ ಪತ್ರವನ್ನೆಲ್ಲ ತಂದುಕೊಟ್ಟು, ಈ ಮನೆ ನಿಮ್ಮದು ನೀವು ಹಾಯಾಗಿ ಈ ಮನೆಯಲ್ಲಿ ಇರಿ ನಾವು ಹೊರಗೆ ಹೋಗುತ್ತೇವೆ ಎಂದು ಹೊರಟರು.
ಗಂಡ ಹೆಂಡತಿ ಹೊರಡಲು ಹೆಜ್ಜೆ ಇಟ್ಟಿದ್ದರೋ, ಇಲ್ಲವೋ ಸಾಕ್ಷಾತ್ ವಿಷ್ಣು ಮಹಾಲಕ್ಷ್ಮಿ ಪ್ರತ್ಯಕ್ಷರಾದರು. ನಿತ್ಯಾನಂದನು ಇಬ್ಬರನ್ನ ನೋಡಿ ಪ್ರಭು, ನಾನು ಏನು ನೋಡುತ್ತಿರುವೆ? ತಾಯಿ ಮಹಾಲಕ್ಷ್ಮಿ ತಂದೆ ಮಹಾವಿಷ್ಣು, ನಮ್ಮ ಮನೆಗೆ ಬಂದು ದರ್ಶನ ಕೊಟ್ಟಿದ್ದೀರಾ? ಎಂಥಾ ಕಠಿಣ ತಪಸ್ಸು ಮಾಡಿದ ವರಿಗೂ ದರ್ಶನ ಕೂಡದ ನೀವು, ನಮ್ಮ ಮನೆಗೆ ಬಂದು ದರ್ಶನ ಕೊಟ್ಟಿದ್ದೀರಿ ಮಹಾಪ್ರಭು ನನ್ನದು ಎಂತಹ ಸೌಭಾಗ್ಯ. ನಾನು ಮಾಡಿದ್ದು ದೊಡ್ಡ ಅಪರಾಧ ನನ್ನನ್ನು ಕ್ಷಮಿಸಿ ಎಂದು ಕಾಲಿಗೆ ನಮಸ್ಕರಿಸಿದನು.
ನಿತ್ಯಾನಂದ ನಿನ್ನನ್ನು ನೋಡಿ ನನಗೆ ಸಂತೋಷವಾಯಿತು. ನಿನ್ನ ಪತ್ನಿ ಮಹಾ ಪುಣ್ಯವಂತೆ ಅವಳಿಗೆ ನಾನು ದರ್ಶನ ಕೊಡುವಂತಾಯಿತು. ನಾನು ಹೇಳಿದಂತೆ ನೀನು ಮಾಡಿದೆ ಯಾವುದನ್ನು ಸುಳ್ಳು ಹೇಳಲಿಲ್ಲ ಆಸೆಪಟ್ಟು ಮುಚ್ಚಿಟ್ಟುಕೊಳ್ಳಲಿಲ್ಲ. ನೀನು ನನ್ನ ಪರೀಕ್ಷೆಯಲ್ಲಿ ಗೆದ್ದಿರುವೆ. ನಿನ್ನ ಪ್ರಾಮಾಣಿಕವಾದ ಶ್ರದ್ಧೆ ಭಕ್ತಿಗಳಿಗೆ ನಾನು ಸಂತೃಪ್ತನಾಗಿದ್ದೇನೆ. ನನಗೆ ಎಲ್ಲವನ್ನು ದಾನ ಮಾಡಿ ನೀನೊಬ್ಬ ಮಹಾದಾನಿ ಎನಿಸಿರುವೆ. ನಿಮ್ಮಿಬ್ಬರಿಗೂ ಸಕಲ ಸನ್ಮಂಗಳವಾಗಲಿ ಎಂದು ಆಶೀರ್ವದಿಸಿ ಅದೃಶ್ಯ ರಾದರು, ನೋಡು ನೋಡುತ್ತಿದ್ದಂತೆ ನಿತ್ಯಾನಂದನ ಮನೆಮೊದಲು ಹೇಗೆ ಇತ್ತು, ಮನೆ ಹಾಗೆ ತುಂಬಿತು.
ನಿತ್ಯಾನಂದನು, ಭಗವಂತನ ಮಾತಿನಂತೆ ಬಡಬಗ್ಗರಿಗೆ ಅನ್ನ, ವಸ್ತ್ರ, ಬಂದ ಲಾಭದಲ್ಲಿ ಹಣವನ್ನು ದಾನ ಮಾಡುತ್ತಾ ಬಂದನು. ಅವನು ಮಾಡುತ್ತಿದ್ದ ಕೆಲಸವೆಲ್ಲವೂ ಹೂವಿನ ಸರ ಎತ್ತಿದಷ್ಟೇ ಸುಲಭವಾಗಿ ನಡೆಯಿತು. ಬಹಳ ಕಾಲ ಸಂತೋಷದಿಂದ ಜೀವಿಸಿ, ಭಗವಂತನ ಪಾದ ಸೇರಿದರು.
ಬರಹ: ಆಶಾ ನಾಗಭೂಷಣ. ಸಂಗ್ರಹ ವರದಿ: ನರಸಿಂಹಮೂರ್ತಿ ಬರಗೂರು. (ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

