ಧಾರವಾಡ, (ನ.22): ಮುಂಗಡ ಹಣ ಪಡೆದು ಮನೆ ಕಟ್ಟಿಕೊಡದ ಬಿಲ್ಡರ್ ಗೆ ಜಿಲ್ಲಾ ಗ್ರಾಹಕರ ಆಯೋಗ ಪರಿಹಾರ ಮತ್ತು ದಂಡ ಕೊಡುವಂತೆ ಆದೇಶಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಗ್ರಾಮದ ಪರಮೇಶ್ವರ ವಿಘ್ನೇಶ್ವರ ಭಟ್ ಎಂಬುವವರು ಧಾರವಾಡದ ವೀರಭದ್ರೇಶ್ವರ ಇನ್‍ಪ್ರಾಸ್ಟ್ರಕ್ಚರ್ ಮತ್ತು ಹೌಸಿಂಗ್ ಪ್ರೈ.ಲಿ. ಇದರ ಆಡಳಿತಾತ್ಮಕ ನಿರ್ದೇಶಕ ನಾಗನಗೌಡ ಶಿವನಗೌಡ ನೀರಲಗಿ ರವರ ಜೊತೆ ಪೂರ್ಣಿಮಾ ಲೇಔಟ್‍ನಲ್ಲಿ 1200 ಚದರ ಅಡಿ ವಿಸ್ತೀರ್ಣದ ಜಾಗೆಯಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಡಲು ರೂ.16,86,167/- ಗಳಿಗೆ ದಿ:05/02/2007 ರಂದು ಒಪ್ಪಂದ ಮಾಡಿಕೊಂಡಿದ್ದು, ಆ ಪೈಕಿ ರೂ.13,95,097/-ಮುಂಗಡವಾಗಿ ನೀಡಿದ್ದರು.
ಮುಂಗಡ ಹಣಕೊಟ್ಟು ಒಪ್ಪಂದ ಆಗಿದ್ದರೂ ಬಿಲ್ಡರ್ ತನಗೆ ಮನೆ ನಿರ್ಮಾಣ ಮಾಡಿಕೊಡದೇ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಎಂದು ಬಿಲ್ಡರ್ ಮೇಲೆ ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಕುರಿತು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಸದಸ್ಯರು ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು, ಅವರಿಗೆ ಮನೆ ಕಟ್ಟಿಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಈ ಬಗ್ಗೆ ವೀರಭದ್ರೇಶ್ವರ ಹೌಸಿಂಗ್ ಪ್ರೈ.ಲಿ. ಆಡಳಿತಗಾರ ಎನ್.ಎಸ್.ನೀರಲಗಿ ದೂರುದಾರರಿಂದ ಪಡೆದ ರೂ.13,95,097/- ಗಳನ್ನು ದಿ:04/06/2015ರಿಂದ ಶೇ.9% ರಂತೆ ಬಡ್ಡಿ ಲೆಕ್ಕ ಹಾಕಿ ಹಾಗೂ ಮಾನಸಿಕ ತೊಂದರೆಗೆ ರೂ.1,00,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000/-ಗಳನ್ನು ಈ ಆದೇಶದ ದಿನಾಂಕದಿಂದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ತೀರ್ಪು ನೀಡಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

