ದೊಡ್ಡಬಳ್ಳಾಪುರ, (ನ.25): ನಾಡಪ್ರಭು ಕೆಂಪೇಗೌಡರು ಆಡಳಿತ ನಡೆಸಿದ ಪ್ರದೇಶವಾದ ದೊಡ್ಡಬಳ್ಳಾಪುರ, ನವ ಬೆಂಗಳೂರಾಗಿ ನಿರ್ಮಾಣವಾಗಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.
ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಗಣ್ಯರಿಗೆ ನಾಡಪ್ರಭು ಕೆಂಪೇಗೌಡರ ಅಭಿಮಾನಿ ಬಳಗದಿಂದ, ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜನಾಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಳ್ಳೆಯತನಕ್ಕೆ ಜ್ವಲಂತ ಸಾಕ್ಷಿ ನಾಡಪ್ರಭು ಕೆಂಪೇಗೌಡರಾಗಿದ್ದಾರೆ. ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಎಷ್ಟೇ ಶತಮಾನಗಳಾದರು ಅದನ್ನು ಸ್ಮರಿಸುವುದಕ್ಕೆ ಮತ್ತು ಪ್ರೇರೇಪಣೆಗೆ ನಾಡ ಪ್ರಭು ಕೆಂಪೇಗೌಡರು ಸಾಕ್ಷಿಯಾಗಿದ್ದಾರೆ. ದೇಶ ವಿದೇಶದಿಂದ ಬರುವ ವ್ಯಕ್ತಿಗಳಿಗೆ ಬೆಂಗಳೂರನ್ನು ಕಟ್ಟಿದ ನಾಡ ಪ್ರಭು ಕೆಂಪೇಗೌಡರ ಬಗ್ಗೆ ತಿಳಿಸುವಂತಾಗಬೇಕೆಂಬ ಜನರ ಬೇಡಿಕೆಗೆ ಸ್ಪಂದಿಸಿ ರಾಜ್ಯ ಸರ್ಕಾರ 108 ಅಡಿ ಪ್ರತಿಮೆ ನಿರ್ಮಿಸಲಾಗಿದೆ.
ಬೆಂಗಳೂರು ವಿಶ್ವಕ್ಕೆ ಮಾದರಿ: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಎಲ್ಲಾ ವರ್ಗದ ಜನರಿಗೆ ಬದುಕನ್ನು ಕಟ್ಟಿಕೊಡಲು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಬೆಂಗಳೂರನ್ನು ಅಚ್ಚುಕಟ್ಟಾಗಿ ನಿರ್ಮಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.
27 ಸಾವಿರ ಕಿಮೀ ಸಂಚಾರ: ಕೆಂಪೇಗೌಡರ ಪ್ರಗತಿ ಪ್ರತಿಮೆ ನೋಡಲು ಬರುವ ಜನರಿಗಾಗಿ, ನಾಡಿನ 24 ಸಾವಿರ ಪವಿತ್ರ ಸ್ಥಳದಿಂದ 21 ಕೆಂಪೇಗೌಡ ರಥದ ಮೂಲಕ, 27 ಸಾವಿರ ಕಿಮೀ ಸಂಚರಿಸಿ ನಾಲ್ಕು ಕಣಜಗಳನ್ನು ಸ್ಥಾಪಿಸಿ ಪವಿತ್ರ ಮಣ್ಣು (ಮೃತ್ತಿಕೆ) ಸಂಗ್ರಹಿಸಿ ಇಡುವ ಮೂಲಕ ಇಡೀ ಕರ್ನಾಟಕದ ಪುಣ್ಯ ಸ್ಥಳದ ಪುಣ್ಯ ದೊರಕಿಸುವಂತೆ ಮಾಡಲಾಗಿದೆ.
3 ಕೋಟಿ 60 ಲಕ್ಷ ಜನ ಭಾಗಿ: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ 3 ಕೋಟಿ 60 ಲಕ್ಷ ಜನ ಭಾಗವಹಿಸಿ ಇತಿಹಾಸವನ್ನು ನಿರ್ಮಿಸಿದ್ದಾರೆ. ಆ ಮೂಲಕ ಪ್ರಗತಿಯ ಪ್ರತಿಮೆಗೆ ಗೌರವ ಸಲ್ಲಿಸಲಾಗಿದೆ.
ಪ್ರಗತಿಯ ಪ್ರತಿಮೆ, ಪ್ರಗತಿಯ ಸಂಕೇತ: ನಮ್ಮ ಕರುನಾಡು ದೇಶದ ಹೆಮ್ಮೆಯ ಕಿರೀಟವಾಗಿದೆ. ಕೆಂಪೇಗೌಡರು ವ್ಯಾಪಾರ ವಹಿವಾಟು, ತೋಟಗಾರಿಕೆ, ಕೃಷಿ ಸಂಸ್ಕೃತಿ ಮತ್ತು ಧರ್ಮರಕ್ಷಣೆಯ ತತ್ತ್ವಗಳ ಆಧಾರದ ಮೇಲೆ ಬೆಂಗಳೂರು ನಗರವನ್ನು ಕಟ್ಟಿ, ನಮಗೆಲ್ಲ ಬಿಟ್ಟು ಹೋಗಿದ್ದಾರೆ. 500 ವರ್ಷಗಳ ಹಿಂದೆ ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಬಾಹ್ಯಾಕಾಶ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಇಂದು ಅಗ್ರಸ್ಥಾನದಲ್ಲಿದ್ದು, ದೇಶಕ್ಕೇ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಕೀರ್ತಿಯನ್ನು ತೋರಿಸಲು ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಪ್ರಗತಿಯ ಪ್ರತಿಮೆ ಎಂದು ಹೆಸರಿಡುವ ಮೂಲಕ ಪ್ರಗತಿಯ ಪ್ರತಿಮೆ, ನಾಡಿನ ಪ್ರಗತಿಯ ಸಂಕೇತವೆಂದು ಸಾರಲಾಗಿದೆ ಎಂದರು.
ದೊಡ್ಡಬಳ್ಳಾಪುರದಲ್ಲಿ ನವ ಬೆಂಗಳೂರು ನಿರ್ಮಾಣವಾಗಲಿ: ದೊಡ್ಡಬಳ್ಳಾಪುರ ಜನರು ಮಾಡುವ ಕೆಲಸಗಳು ಒಳಿತಾಗಲಿ. ಬೆಂಗಳೂರುಗಿಂತ ಗಟ್ಟಿ ಜನ ದೊಡ್ಡಬಳ್ಳಾಪುರದಲ್ಲಿ ಇದ್ದಾರೆಂದು ಕೇಳಿದ್ದೇನೆ. ಬೆಂಗಳೂರಿಗೆ ನಾಡಪ್ರಭು ಪ್ರೇರೇಪಣೆ, ಅವರು ಆಡಳಿತ ನಡೆಸಿದ ಪ್ರದೇಶವಾದ ದೊಡ್ಡಬಳ್ಳಾಪುರ ಬೆಂಗಳೂರಿಗಿಂತ ಗಟ್ಟಿಯಾದ ನವ ಬೆಂಗಳೂರಾಗಿ ನಿರ್ಮಾಣವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ಮಾತನಾಡಿ, ನಾಡ ಪ್ರಭು ಕೆಂಪೇಗೌಡರ ಜೀವನ ಚರಿತ್ರೆಯಿಂದ ಕಲಿಯಬೇಕಾದ್ದು ಅಪಾರವಾಗಿದ್ದು, ಎಷ್ಟೇ ಕಠಿಣವಾದ ಸಮಸ್ಯೆ ಎದುರಾದರು ಹೆದರಿ ಓಡಿ ಹೋಗದೆ, ಎದುರಿಸುವುದನ್ನು ಕೆಂಪೇಗೌಡರ ಪ್ರತಿಮೆಯ ಸ್ಥಾಪನೆಯ ನಂತರವಾದರು ಅರಿತುಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಕೃಷ್ಣಪ್ಪ, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ,
ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಡಾ.ಆಂಜನಪ್ಪ, ಕರ್ನಾಟಕ ರಾಜ್ಯ ರೇಷ್ಮೆ ಮಂಡಲಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್, ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ಬಿಜೆಪಿ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಧೀರಜ್ ಮುನಿರಾಜು, ಜಿಪಂ ಮಾಜಿ ಸದಸ್ಯ ಕುರುವಿಗೆರೆ ಎ.ನರಸಿಂಹಯ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

