ದೊಡ್ಡಬಳ್ಳಾಪುರ, (ನ.29): ತಾಲೂಕಿನ ಹುಲಿಕುಂಟೆ ಸಮೀಪ ಸೋಮವಾರ ಸಂಜೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದ ನೆಲಮಂಗಲ ತಾಲ್ಲೂಕಿನ ಮರಳುಕುಂಟೆ ಗ್ರಾಮದ ನಿವಾಸಿಗಳಾದ ಮಹೇಶ್ (27) ಮತ್ತು ಮಾರುತಿ (24) ಅವರ ಕುಟುಂಬದವರಿಗೆ ತಲಾ ರೂ.25 ಲಕ್ಷ ಪರಿಹಾರ ನೀಡಲು ಲಿಖಿತ ಭರವಸೆ ನೀಡಲಾಗಿದೆ.

ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವವರೆಗೂ ಮೃತದೇಹಗಳನ್ನು ರಸ್ತೆಯಿಂದ ತೆಗೆಯುವುದಿಲ್ಲ ಎಂದು ಶಾಸಕ ಟಿ.ವೆಂಕಟರಮಣಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ತಡರಾತ್ರಿ 2 ಗಂಟೆ ಸುಮಾರಿನವರೆಗೂ ಪ್ರತಿಭಟನೆ ನಡೆಸಲಾಯಿತು.

ಜನರ ಪ್ರತಿಭಟನೆಗೆ ಮಣಿದ ಬಿಬಿಎಂಪಿ ಜಂಟಿ ಆಯುಕ್ತ ಪರಶುರಾಂ ಅವರು ರಾತ್ರಿಯೇ ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಪರಿಹಾರದ ಭರವಸೆ ನೀಡಿದ ಬಳಿಕ ಮೃತದೇಹಗಳನ್ನು ರಸ್ತೆಯಿಂದ ತೆರವುಗೊಳಿಸಿ ಮಂಗಳವಾರ ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ತಮಿಳುನಾಡು ಮೂಲದ ಬಾಲಕೃಷ್ಣನ್ (34ವರ್ಷ) ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಅಲ್ಲದೆ ಚಾಲಕನ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಮದ್ಯಪಾನ ಮಾಡಿರುವುದು ವರದಿ ನಂತರ ತಿಳಿದು ಬರಲಿದೆ.
ಇದೇ ರಸ್ತೆಯಲ್ಲಿ ಸೆ.4 ರಂದು ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದ ಮಾವಿನಕುಂಟೆ ಗ್ರಾಮದ ರಾಜು ಅವರ ಕುಟುಂಬದವರಿಗು ರೂ.25 ಲಕ್ಷ ಪರಿಹಾರವನ್ನು ನೀಡಲಾಗಿತ್ತು.
ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಚಿಗರೇನಹಳ್ಳಿ ಸಮೀಪದ ಎಂಎಸ್ಜಿಪಿ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಪ್ರತಿದಿನವು ಸುಮಾರು 150ಕ್ಕೂ ಹೆಚ್ಚಿನ ಲಾರಿಗಳು ಕಸ ತುಂಬಿಕೊಂಡು ಬರುತ್ತಿವೆ.
ಕಸದ ಲಾರಿಗಳಿಂದ ಅಪಘಾತಗಳು ನಡೆದು ಮೃತಪಟ್ಟಾಗ ಸ್ಥಳೀಯರು ಪ್ರತಿಭಟನೆಗೆ ಮುಂದಾದರೆ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಲು ಇನ್ನಿಲ್ಲಿದ ಸಾಹಸ ಮಾಡುತ್ತಾರೆ. ಆದರೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಬರುವ ಲಾರಿಗಳಿಂದ ಬರುವ ದುರ್ನಾತವನ್ನು ಸಹಿಸಿಕೊಳ್ಳಲು ಹಾಗೂ ರಾತ್ರಿ ಹಗಲೆನ್ನದೇ ಕಸ ತುಂಬಿಕೊಂಡು ಬರುವ ಲಾರಿಗಳ ಚಾಲಕರು ಮಧ್ಯಸೇವನೆ ಮಾಡಿ ಲಾರಿಗಳನ್ನು ಚಲಾಯಿಸುತ್ತಿರುವುದರಿಂದಲೇ ಅಪಘಾತಗಳು ನಡೆಯಲು ಕಾರಣವಾಗಿದೆ ಎಂಬ ಅರೋಪ ಕೇಳಿಬಂದಿದೆ.
ಕನಿಷ್ಠ ತಿಂಗಳಿಗೆ ಒಮ್ಮೆಯಾದರು ಕಸದ ಲಾರಿಗಳ ಸ್ಥಿತಿ, ಚಾಲಕರ ಚಾಲನ ಪರವಾನಿಗಿಯನ್ನು ತಪಾಸಣೆ ನಡೆಸುವಂತೆ ಪೊಲೀಸರಿಗೆ ಹಲವಾರು ಬಾರಿ ಮನವಿ ಮಾಡಿದ್ದರು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಬಿಬಿಎಂಪಿ ಕಸದ ಲಾರಿಗಳು ಮತ್ತಷ್ಟು ಜೀವಗಳನ್ನು ಬಲಿಪಡೆಯುವ ಮುನ್ನ ಪೊಲೀಸರು ಸೂಕ್ತ ತಪಾಸಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
