ದೊಡ್ಡಬಳ್ಳಾಪುರ, (ಡಿ.03): ಸರ್, ನಮ್ಮ ಶಾಲೆಗೆ ಕಂಪೌಂಡ್ ಇಲ್ಲ, ಎಮ್ಮೆ, ಹೋರಿ, ದನ ಬರುತ್ತವೆ ಹಾಗೂ ಊರಿನ ಕೆಲವು ಪುಂಡರು, ಕುಡುಕರು ಶಾಲೆ ಮೈದಾನ ಹಾಳು ಮಾಡುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಪಾಠ ಕೇಳಲು, ಪರೀಕ್ಷೆ ಬರೆಯಲು ‘ಬೆಂಚು, ಡೆಸ್ಕ್’ ಇಲ್ಲ ಸರ್..! ನೆಲದಲ್ಲಿ ಕೂರಬೇಕು ಬಟ್ಟೆ ಎಲ್ಲಾ ಕೊಳೆ ಆಗುತ್ತೆ ಬೆನ್ನು ನೋವು ಆಗುತ್ತೆ. ನೆಲದ ಮೇಲೆ ಕೂತು, ಪರೀಕ್ಷೆ ಪೇಪರ್ ಕಾಲು ಮೇಲೆ ಇಟ್ಟು ಪರೀಕ್ಷೆ ಬೇಗ ಬರೆಯಲು ಆಗುತ್ತಿಲ್ಲ. ಬೆಂಚು ಡೆಸ್ಕ್ ಕೊಡಿಸಿ. ಮ್ಮ ಶಾಲೆಯಲ್ಲಿ ವಿಜ್ಞಾನ ಮತ್ತು ಇಂಗ್ಲೀಷ ಟೀಚರ್ ಇಲ್ಲ,ನಮ್ಮ ಶಾಲೆಯಲ್ಲಿ ಕುಡಿಯುವ ನೀರು ಇಲ್ಲ ತುಂಬಾ ಕಷ್ಟ ಆಗ್ತಿದೆ. ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು, ತೂಬಗೆರೆ ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ ವಿಶೇಷ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯ ಅಳಲು ತೋಡುಕೊಂಡರು.

ಮಕ್ಕಳ ಸಮಸ್ಯೆಗಳನ್ನು ಕೇಳಿ ಹೈರಾಣಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಮಕ್ಕಳ ಸಮಸ್ಯೆಗಳನ್ನು ಶೀಘ್ರವಾಗಿ ಪಂಚಾಯಿತಿ ಕ್ರಿಯಾಯೋಜನೆಗೆ ಸೇರಿಸಿ ಬಗೆಹರಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.

ಯುವಮುಖಂಡ ಉದಯ್ ಆರಾಧ್ಯ, ಮಕ್ಕಳ ಹಕ್ಕುಗಳ ಅನುಷ್ಠಾನ, ಮಕ್ಕಳ ಸಂರಕ್ಷಣೆ ಮತ್ತು ಮಕ್ಕಳ ಅಭಿವೃದ್ಧಿ ಒಂದು ರಾಷ್ಟ್ರೀಯ ಕಾರ್ಯಕ್ರಮ. ಆದ್ದರಿಂದ ಮಕ್ಕಳ ಹಕ್ಕುಗಳ ಗ್ರಾಮಸಭೆ ವಿಶೇಷ ಮಹತ್ವದ್ದಾಗಿದೆ. ಆದರೆ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷ ಮಕ್ಕಳ ಗ್ರಾಮ ಸಭೆಗೆ ಕ್ಷೇತ್ರಶಿಕ್ಷಣಾಧಿಕಾರಿಗಳು, ಸಿಡಿಪಿಓ ಹಾಗೂ ಅನೇಕ ಇಲಾಖೆಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗೈರು ಹಾಜರಿಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಸುರೇಶ್ ಬಾಬು ಸದಸ್ಯರುಗಳಾದ ರಾಮಕೃಷ್ಣ, ರಾಜಕುಮಾರ್, ಶಿವಣ್ಣ, ಪಿಡಿಓ ವೆಂಕಟೇಶ್, ನೋಡಲ್ ಅಧಿಕಾರಿ ಮೂರ್ತಿ ಎಸ್ಡಿಎಂಸಿ ಅಧ್ಯಕ್ಷರಾದ ಅಂಬಿಕಾ, ಸದಸ್ಯರಾದ ದೇವರಾಜ್, ಮುಖ್ಯೋಪಾಧ್ಯಾಯರಾದ ಗಿರೀಶ್, ಸರ್ಕಾರಿ ಶಾಲೆಯ ಶಿಕ್ಷಕ ವೃಂದ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
