ದೊಡ್ಡಬಳ್ಳಾಪುರ, (ಡಿ.07): ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವ ದಿನ ಗಣನೆ ಆರಂಭವಾಗಿರುವ ಬೆನ್ನಲ್ಲೇ, ಮಂಗಳವಾರ ಸಂಜೆ ಘಾಟಿ ರಸ್ತೆಯಲ್ಲಿನ ಲಘುಮೇನಹಳ್ಳಿ ಕ್ರಾಸ್ ಬಳಿ ಚಿರತೆ ಎದುರಾಗಿದ್ದು, ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆವತಿಯಿಂದ ಕೋಂಬಿಂಗ್ ನಡೆಸಲಾಯಿತು.
ಮಂಗಳವಾರ ಸಂಜೆ ಘಾಟಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮರುಳುತ್ತಿದ್ದ ಕೃಷ್ಣಮೂರ್ತಿ ಎನ್ನುವವರು, ಲಘುಮೇನಹಳ್ಳಿ ಕ್ರಾಸ್ ಬಳಿ ಚಿರತೆಯು ತನ್ನ ಎರಡು ಮರಿಗಳೊಂದಿಗೆ ರಸ್ತೆ ದಾಟಿರುವುದನ್ನು ಕಂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಈ ಹಿನ್ನಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಇನ್ಸ್ಪೆಕ್ಟರ್ ಮುನಿಕೃಷ್ಣ ಹಾಗೂ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ನಂತರ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸುಮಾರು 10 ಮಂದಿ ಸಿಬ್ಬಂದಿಗಳು ಕೋಂಬಿಂಗ್ ನಡೆಸಿದರಾದರು, ಚಿರತೆ ಪತ್ತೆಯಾಗಿಲ್ಲ.
ಇತ್ತೀಚೆಗಷ್ಟೆ ಘಾಟಿ ಬಳಿಯ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿನ ಹಸುಗಳ ಮೇಲೆ ದಾಳಿ, ಚನ್ನಾಪುರದಲ್ಲಿ ಹಸುವನ್ನು ಚಿರತೆ ಕೊಂದಿರುವುದು ಈ ವ್ಯಾಪ್ತಿಯ ಜನರ ಅತಂಕವನ್ನು ಸೃಷ್ಟಿಸಿದೆ.
ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಲು ರಾಷ್ಟ್ರೋತ್ಥಾನ ಗೋಶಾಲೆ ಹಾಗೂ ಚನ್ನಾಪುರದ ಬಳಿ ಬೋನ್ ಅಳವಡಿಸಲಾಗಿದ್ದು, ನಿರಂತರವಾಗಿ ಪೆಟ್ರೋಲಿಂಗ್ ನಡೆಸಲಾಗುವುದೆಂದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹರಿತಲೇಖನಿಗೆ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

