ದೊಡ್ಡಬಳ್ಳಾಪುರ, (ಡಿ,14): ನಗರದಲ್ಲಿರುವ ತಾಯಿ ಮಗು ಆಸ್ಪತ್ರೆ ಬಳಿ ಎಜಾಕ್ಸ್ ಕಂಪನಿಯ ಸಿ.ಎಸ್.ಆರ್ ಅನುದಾನ ಸುಮಾರು ಒಂದೂವರೆ ಕೋಟಿ ರೂ ವೆಚ್ಚದಲ್ಲಿ ಹೊರ ರೋಗಿಗಳ ವಿಭಾಗವನ್ನು ನಿರ್ಮಿಸಲಾಗುತ್ತಿದೆ. ನಮ್ಮ ಕ್ಲಿನಿಕ್‍ಗಳ ಆರಂಭದಿಂದಾಗಿ ತಾಯಿ ಮತ್ತು ಮಗು ಆಸ್ಪತ್ರೆ ಮೇಲಿನ ಹೊರೆ ತಗ್ಗಲಿದ್ದು, ನಗರಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ನಗರಸಭೆಯ ಹಳೆಯ ಕಟ್ಟಡ, ವಿದ್ಯಾನಗರದ ಶಾಲೆಯ ಆವರಣ ಹಾಗೂ ಬಾಶೆಟ್ಟಿಹಳ್ಳಿಯ ಹಳೆಯ ಸರ್ಕಾರಿ ಶಾಲೆ ಅವರಣದಲ್ಲಿ ಸ್ಥಾಪಿಸಿರುವ ನಮ್ಮ ಕ್ಲಿನಿಕ್‍ಗಳನ್ನು ಉದ್ಘಾಟಿಸಿ ಮಾತನಾಡಿದರು.
ನಗರದ ತಾಯಿ ಮತ್ತು ಮಗು ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ 800 ಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಇದರಿಂದ ಆಸ್ಪತ್ರೆಯಲ್ಲಿ ಒತ್ತಡ ಹೆಚ್ಚಾಗಲಿದ್ದು, ನಮ್ಮ ಕ್ಲಿನಿಕ್‍ಗಳ ಆರಂಭ ಸೂಕ್ತವಾಗಿದೆ ಎಂದರು. ರಾಜ್ಯದ ಜನರ ಆರೋಗ್ಯವನ್ನು ಕಾಪಾಡಲು ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೇರೆ ತಾಲೂಕಿನ ಪಾಲಾಗುತ್ತಿದ್ದ ಜಿಲ್ಲಾ ಆಸ್ಪತ್ರೆಯನ್ನು ದೊಡ್ಡಬಳ್ಳಾಪುರಕ್ಕೆ ಮಂಜೂರು ಮಾಡಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಅನುಕೂಲಕ್ಕೆ ಕೈಗಾರಿಕೆಗಳ ಸಿ.ಎಸ್.ಆರ್ ಅನುದಾನದ ಮೂರುವರೆ ಕೋಟಿ ರೂ ವೆಚ್ಚದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲಾಗಿದೆ. ಜಿಲ್ಲಾ ಆಸ್ಪತ್ರೆಗೆ ತ್ವರಿತವಾಗಿ ನಿರ್ಮಿಸಲು ಸರ್ಕಾರದ ಮೇಲೆ ನಾನು ಸಹ ಒತ್ತಡವನ್ನು ಹಾಕುತ್ತಿದ್ದು, ತಾವು ಸಹ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ತಾಲೂಕಿನ ಜನತೆಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ನಮ್ಮ ಕ್ಲಿನಿಕ್ ಆರಂಭವಾಗುವುದರಿಂದ ಜನರಿಗೆ ಆರೋಗ್ಯ ಹಾಗೂ ಸರ್ಕಾರಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಹೆಚ್ಚಲಿದ್ದು, ಜನತೆ ಆರೋಗ್ಯ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಮಾತನಾಡಿ, ನಮ್ಮ ಕ್ಲಿನಿಕ್‍ಗಳಲ್ಲಿ ದೈಹಿಕ ತಪಾಸಣೆ, ರಕ್ತ ಪರೀಕ್ಷೆ, ರಕ್ತದೊತ್ತಡ, ಮಧುಮೇಹ, ಪರೀಕ್ಷೆಗಳು ಸೇರಿ ಎಲ್ಲವೂ ಉಚಿತ. ಔಷಧಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ, ಮೇಲಿನ ಹಂತದ ಚಿಕಿತ್ಸೆಗೆ ಇಲ್ಲಿನ ವೈದ್ಯರೇ ಶಿಫಾರಸು ಮಾಡಿ ಬೇರೆ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ಸಮಗ್ರ ಆರೋಗ್ಯ ಸೇವೆಗಳು ಸಾರ್ವತ್ರಿಕ ಲಸಿಕಾಕರಣ, ಕುಟುಂಬ ಕಲ್ಯಾಣ ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೈಕೆ ಕೇಂದ್ರಗಳು, ತುರ್ತು ವೈದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ, ಉಚಿತ ಪ್ರಯೋಗಶಾಲಾ ಸೇವೆಗಳು ಮೂತ್ರ ಪರೀಕ್ಷೆ, ಕ್ಷಯ ಪರೀಕ್ಷೆ, ಡೆಂಗಿ, ಮಲೇರಿಯಾದಂತಹ 12 ರೀತಿಯ ಸೇವೆಯನ್ನು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷೆ ಫರ್ಹಾನಾ ತಾಜ್, ಪೌರಾಯುಕ್ತ ಕೆ.ಜೆ.ಶಿವಶಂಕರ್, ಡಾ.ಸೀಮಾ, ಡಾ.ಧರ್ಮೇಂದ್ರ, ನಗರಸಭಾ ಸದಸ್ಯರಾದ ರಜನಿ, ಎಸ್.ನಾಗಮಣಿ, ಶಿವಶಂಕರ್, ತ.ನ.ಪ್ರಭುದೇವ್, ಶಿವಕುಮಾರ್ ಸೇರಿದಂತೆ ನಗರಸಭೆ ಸದಸ್ಯರು, ಸ್ಥಳೀಯ ಮುಖಂಡರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

