
ದೊಡ್ಡಬಳ್ಳಾಪುರ, (ಡಿ.15): ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನೋಂದಣಿ ಇಡೀ ರಾಜ್ಯದಲ್ಲಿ ಗುರುವಾರದಿಂದ ಪ್ರಾರಂಭವಾಗಿದೆ. ಆದರೆ ದೊಡ್ಡಬಳ್ಳಾಪುರದಲ್ಲಿ ಮಾತ್ರ ಆರಂಭಿಸದೆ ಅಧಿಕಾರಗಳು ಕುಂಟು ನೆಪಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಆಕ್ರೋಶಗೊಂಡ ರೈತರು ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

2022-23ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್ಸಿಎಸ್ಸಿ ಬೆಂಗಳೂರು ದಕ್ಷಿಣ) ಇವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ಡಿ.15 ರಿಂದ ರಾಗಿ ಖರೀದಿಗೆ ಸಂಬಂಧಿಸಿದಂತೆ ರೈತರ ನೋಂದಣಿ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದರು.

ಈ ಮಾಹಿತಿ ಮೇರೆಗೆ ರೈತರು ಬೆಳಗಿನ ಜಾವದಿಂದಲೇ ಎಪಿಎಂಸಿ ಆವರಣದಲ್ಲಿನ ರಾಗಿ ಖರೀದಿ ನೋಂದಣಿ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದರು.
ಹತ್ತು ಗಂಟೆಯ ನಂತರ ಸ್ಥಳಕ್ಕೆ ಬಂದ ಕೆಲ ಅಧಿಕಾರಿಗಳು ನೋಂದಣಿ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡದೆ ಗೊಂದಲ ಉಂಟುಮಾಡಿದರು. ಇದರಿಂದ ಅಸಮಾಧಾನಗೊಂಡ ರೈತರು ನೋಂದಣಿ ಆರಂಭಿಸಬೇಕೆಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದರು.
ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಮೋಹನಕುಮಾರಿ ಅವರು ಆಹಾರ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದರು.
ಮಧ್ಯಾಹ್ನ ನಂತರ ರೈತರಿಂದ ನೋಂದಣಿಯನ್ನು ಸಾಸಲು ಹೋಬಳಿ ಕೇಂದ್ರದಲ್ಲಿ ಹಾಗೂ ನಗರದ ಎಪಿಎಂಸಿ ರಾಗಿ ಖರೀದಿ ಕೇಂದ್ರದಲ್ಲಿ ಪ್ರಾರಂಭಿಸಿದರು.
ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿರುವ ರೈತರಿಂದ 2022-23ನೇ ಸಾಲಿನ ರಾಗಿ ಖರೀದಿಯು ಜನವರಿ 1 ರಿಂದ ಮಾರ್ಚ್ 31ರವರೆಗೆ ನಡೆಯಲಿದೆ. 2021-22 ರಲ್ಲೂ ತಾಲ್ಲೂಕಿನಲ್ಲಿ ಇದೇ ರೀತಿ ರಾಗಿ ನೋಂದಣಿಯಿಂದ, ಖರೀದಿ ಮುಕ್ತಾಯವಾಗುವವರೆಗೂ ಅಧಿಕಾರಿಗಳು ರೈತರಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಠಿಸಿದ್ದರು.
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಯ ಸಂಪೂರ್ಣ ಜವಾಬ್ದಾರಿ ಆಹಾರ ಇಲಾಖೆ ಹಾಗೂ ರಾಗಿ ಖರೀದಿ ಮಾಡಲು ಸರ್ಕಾರ ನೇಮಿಸಿರುವ ಏಜನ್ಸಿಯವರದ್ದು. ಆದರೆ ಸಮಸ್ಯೆ ಉಂಟಾದಾಗ ರೈತರಿಗೆ ಉತ್ತರ ನೀಡಲು ಹಾಗೂ ಖರೀದಿ ಕೇಂದ್ರದ ಬಳಿ ಸೂಕ್ತ ಸೌಲಭ್ಯ ಕಲ್ಪಿಸಲು ಮಾತ್ರ ಖರೀದಿ ಕೇಂದ್ರದ ಕಡೆಗೆ ಆಹಾರ ಇಲಾಖೆ ಅಧಿಕಾರಿಗಳು, ಏಜೆನ್ಸಿ ಪಡೆದವರು ಬರುವುದೇ ಅಪರೂಪ.
ಗುರುವಾರ ಸಂಜೆ 4 ಗಂಟೆ ಸುಮಾರಿಗೆ ರಾಗಿ ಖರೀದಿ ಏಜೆನ್ಸಿ ಪಡೆದಿರುವವರ ಕಡೆಯವರು ಬಂದು ಖರೀದಿ ಕೇಂದ್ರ ಬಳಿ ಬ್ಯಾನರ್ ಕಟ್ಟಿ, ರಾಗಿ ಖರೀದಿಯ ಕುರಿತಂತೆ ಮಾಹಿತಿಯನ್ನು ಒಳಗೊಂಡ ಕರಪತ್ರಗಳನ್ನು ರೈತರಿಗೆ ಹಂಚಿಕೆ ಮಾಡಿ ಪೋಟೋ ತೆಗೆಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
