
ದೊಡ್ಡಬಳ್ಳಾಪುರ, (ಡಿ.15): ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನೊಂದಣಿಗೆ ಬರುವ ರೈತರಿಗೆ ಯಾವುದೇ ಪ್ರತಿಭಟನೆಯ ಅಡ್ಡಿ ಮಾಡುವುದಿಲ್ಲವೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಮುಖಂಡರು ಭರವಸೆ ನೀಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಭರವಸೆ ನೀಡಿದ್ದು, ಈ ವೇಳೆ ಮಾತನಾಡಿರುವ ಸಂಘದ ಮುಖಂಡರು, ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಸಣ್ಣ, ದೊಡ್ಡ ರೈತರೆಂಬಂತೆ ರೈತರನ್ನು ಒಡೆಯುತ್ತಿರುವ ಸರ್ಕಾರದ ಧೋರಣೆ ಖಂಡಿಸಿದ್ದಾರೆ. ರಾಗಿ ಖರೀದಿಯಲ್ಲಿ ತಾರತಮ್ಯ ಮಾಡದೆ ಎಲ್ಲಾ ರೈತರಿಂದ ರಾಗಿ ಖರೀದಿ ಮಾಡಬೇಕೆಂದು ಗಡುವು ನೀಡಿದ್ದು, ಇಲ್ಲವಾದಲ್ಲಿ ತಾಲೂಕು ಕಚೇರಿ ಬಳಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಬಮೂಲ್ ನಿಂದ ಹಾಲಿನ ಹಣಕ್ಕೆ ಕೊಕ್ಕೆ: ರೈತರ ಬೇಡಿಕೆ, ರೈತ ಸಂಘದ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಹಾಲಿನ ಬೆಲೆಯಲ್ಲಿ ಎರಡು ರೂ ಹೆಚ್ಚಳ ಮಾಡಿದೆ. ಆದರೆ ಬಮೂಲ್ ಆಡಳಿತಾತ್ಮಕ ವೆಚ್ಚದ ಹೆಸರಲ್ಲಿ ರೂ.1.10 ಪೈಸೆ ಸರ್ಕಾರದ ಹಣವನ್ನು ಕಡಿತಗೊಳಿಸಿ, ರೈತರಿಗೆ ಕೇವಲ 90 ಪೈಸೆ ಹೆಚ್ಚಳ ಮಾಡಿ ರೈತರಿಗೆ ವಂಚನೆ ಮಾಡುತ್ತಿದೆ ಎಂದು ಮುಖಂಡರು ಅರೋಪಿಸಿದರು.
ಈಗಾಗಲೇ ಬೆಲೆ ಏರಿಕೆಯಿಂದ ತಾಲೂಕಿನ ರೈತರು ಪಶುಪಾಲನೆಯಿಂದ ವಿಮುಖರಾಗುತ್ತಿದ್ದು, ಹಾಲಿನ ಪೂರೈಕೆ ಗಣನೀಯವಾಗಿ ಕುಸಿದಿದೆ. ಇದೇ ರೀತಿ ರೈತರಗೆ ವಂಚನೆ, ಬೆಲೆ ಹೆಚ್ಚಳ ಜಾಸ್ತಿಯಾದಲ್ಲಿ ಹಾಲಿಗೆ ಕೊರೆತೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಪರಿಹಾರಕ್ಕೆ ಒತ್ತಾಯ: ತೊಂಡೆಬಾವಿಯಿಂದ ಮಾಕಳಿ ಮೂಲಕ ಬಾಶೆಟ್ಟಿಹಳ್ಳಿ ಕೈಗಾರಿಕೆ ಪ್ರದೇಶಕ್ಕೆ ಹಾದು ಹೋಗಿರುವ ವಿದ್ಯುತ್ ಲೈನ್ ಅನ್ನು ದ್ವಿಮಾರ್ಗಗೊಳಿಸಲು ಬೆಸ್ಕಾಂ ಇಲಾಖೆ ಮುಂದಾಗಿದ್ದು, ರೈತರು ಭೂಮಿ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಈಗಾಗಲೇ ಲೈನ್ ಎಳೆಯಲು ಕಂಬಿಗಳನ್ನು ಅಳವಡಿಸಿದ್ದರು ಮತ್ತೆ ಕಂಬಿಗಳನ್ನು ಅಳವಡಿಸಿ ಬಡ ರೈತನ ಹೊಟ್ಟೆಯ ಮೇಲೆ ಬೆಸ್ಕಾಂ ಬರೆ ಎಳೆಯುತ್ತಿದೆ. ಈ ನಿಟ್ಟಿನಲ್ಲಿ ಸಭೆ ನಡೆಸಿ ರೈತರಿಗೆ ಪರಿಹಾರ ನೀಡಬೇಕಿದೆ. ಇಲ್ಲವಾದಲ್ಲಿ ರೈತನ ಜಮೀನನ್ನು ಬಡಿಗೆಗೆ ಪಡೆದು ಬಾಡಿಗೆ ನೀಡಬೇಕೆಂದು ಒತ್ತಾಯಿಸಿದರು.
ಕೃಷಿ ಕಾಯ್ದೆ: ರೈತರ ಆಕ್ರೋಶಕ್ಕೆ ಮಣಿದು ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂಪಡೆದಿದೆ. ಆದರೆ ಕಾಯ್ದೆಯನ್ನು ಹಿಂಪಡೆಯದೆ ಪದೇ ಪದೇ ನುಣುಚಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 19ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕೃಷಿಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ತಾಲೂಕಿನ ನೂರಾರು ರೈತರು ಭಾಗಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಪ್ರಸನ್ನ, ಹನುಮೇಗೌಡ, ಸತೀಶ್, ನ್ಯಾಯವಾದಿ ಸತೀಶ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
